ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಅವಹೇಳನಕಾರಿ ವಿಡಿಯೋ ಹರಿಬಿಟ್ಟಿದ್ದ ಯುವಕನನ್ನು ಕನಕಗಿರಿ ಪೊಲೀಸರು ಬಂಧಿಸಿದ್ದಾರೆ . ಹುಸೇನಿ ಬಂಧಿತ ಯುವಕ. ಸದ್ಯ ಈತನ ವಿರುದ್ಧ ಗುನ್ನೆ ನಂಬರ್ 162/2025, ಕಲಂ 353(1)ಸಿ, 353(2) ಬಿಎನ್ಎಸ್ 2003 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದ ಯುವಕ ಹುಸೇನಿ, ಶಾಸಕ ಯತ್ನಾಳ್ ವಿರುದ್ದ ಅವಹೇಳಕಾರಿ ಮಾತನಾಡಿ ವಿಡಿಯೋ ಹರಿಬಿಟ್ಟಿದ್ದ. ವಿಡಿಯೋ ವೈರಲ್ ಆದ ಬೆನಲ್ಲೇ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೆ ಯತ್ನಾಳ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದರು.
ಹುಸೇನಿ ಹೇಳಿದ್ದೇನು?
ಶಾಸಕ ಯತ್ನಾಳ್ ಅಧಿವೇಶನದಲ್ಲಿ ಆಜಾನ್ ಕುರಿತಾಗಿ ಪ್ರಸ್ತಾಪಿಸಿದ್ದ ವಿಚಾರವಾಗಿ ವಿಡಿಯೋ ಹರಿಬಿಟ್ಟಿದ್ದ ಹುಸೇನಿ, ‘ನೀನು ಬೂಟು ನೆಕ್ಕಿದ ವಂಶಸ್ಥ’ ಎಂದು ನಾಲಿಗೆ ಹರಿಬಿಟ್ಟಿದ್ದ. ಈ ವಿಡಿಯೋ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮುಸಲಾಪುರ ಗ್ರಾಮದಲ್ಲಿ ಜಮಾವಣೆಗೊಂಡಿದ್ದ ಯತ್ನಾಳ್ ಬೆಂಬಲಿಗರು ಕ್ರಮಕ್ಕೆ ಒತ್ತಾಯಿಸಿದ್ದರು. ಬಳಿಕ ಹುಸೇನಿ ಕ್ಷಮೆ ಕೂಡ ಕೇಳಿದ್ದಾನೆ.
ಯತ್ನಾಳ್ ವಿರುದ್ದ ಕೊಪ್ಪಳ ನಗರ ಠಾಣೆಯಲ್ಲಿ ಕೇಸ್ ದಾಖಲು
ಇನ್ನು ಇತ್ತೀಚೆಗೆ ಕೊಪ್ಪಳದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಆಡಿದ್ದ ಮಾತು ರಾಜ್ಯದಲ್ಲಿ ಕಿಡಿ ಹೊತ್ತಿಸಿತ್ತು. ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಕೊಡಲಾಗುವುದು ಎಂದು ಹೇಳಿದ್ದರು.
ಹಿಂದೂ ಯುವಕ ಗವಿಸಿದ್ದಪ್ಪ ನಾಯಕ್ ನಿವಾಸಕ್ಕೆ ಭೇಟಿ ನೀಡಿ ಆತನ ಕುಟುಂಬಕ್ಕೆ ಸಾಂತ್ವನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನ ಮುಸ್ಲಿಂ ಸಮುದಾಯ ತೀವ್ರವಾಗಿ ಖಂಡಿಸಿತ್ತು. ಯತ್ನಾಳ್ ಕಾರ್ಗೆ ವಿಜಯಪುರದಲ್ಲಿ ಮುತ್ತಿಗೆ ಕೂಡ ಹಾಕಲಾಗಿತ್ತು.
ಘಟನೆ ನಡೆದು ಹತ್ತು ದಿನಗಳ ಬಳಿಕ ಕೊಪ್ಪಳ ನಗರ ಠಾಣೆಯಲ್ಲಿ ಯತ್ನಾಳ್ ವಿರುದ್ದ ದೂರು ಕೂಡ ದಾಖಲಾಗಿತ್ತು. ಮುಸ್ಲಿಂ ಸಮುದಾಯದ ಮುಖಂಡ ಅಬ್ದುಲ್ ರಜಾಕ್ ದೂರು ನೀಡಿದ್ದರು. ಯತ್ನಾಳ್ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ, ಅವರ ಮೇಲೆ ಕ್ರಮ ಆಗಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.
For More Updates Join our WhatsApp Group :