ಸರ್ಕಾರಿ ಇಲಾಖೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ

Kannada is mandatory in the nameplates of government departments

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

ಬೆಂಗಳೂರು: ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಪ್ರದರ್ಶಿಸುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುತ್ತದೆ. ರಾಜ್ಯದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಅಧಿನಿಯಮ 2024 ಜಾರಿಗೆ ಬಂದಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರನ್ವಯ ಕನ್ನಡ ಭಾಷೆಯು ರಾಜ್ಯದ ಹಾಗೂ ಸ್ಥಳೀಯ ಪ್ರಾಧಿಕಾರದ ಅಧಿಕೃತ ಭಾಷೆಯಾಗಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಇಲಾಖೆಗಳಲ್ಲಿ, ಆಯುಕ್ತಾಲಯ, ನಿರ್ದೇಶನಾಲಯ, ನಿಗಮ ಮಂಡಳಿ, ಪ್ರಾಧಿಕಾರಗಳ ಆವರಣಗಳಲ್ಲಿನ ಹೆಸರು, ಪದನಾಮ, ಸೇವಾ ಅವಧಿಯ ನಾಮಫಲಕಗಳು, ಮಾರ್ಗಗಳ ಸೂಚನಾ ಫಲಕಗಳು, ಇನ್ನಿತರೆ ಯಾವುದೇ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಪ್ರದರ್ಶಿಸುವಂತೆ ಸೂಚಿಸಿದೆ. ಮುಂದುವರೆದು, ತೀರಾ ಅನಿವಾರ್ಯವಿದ್ದಲ್ಲಿ ಮಾತ್ರ ಕಡ್ಡಾಯವಾಗಿ ಕನ್ನಡ ಭಾಷೆಯು ಶೇಕಡ 60 ರಷ್ಟು ನಾಮಫಲಕದ ಮೇಲ್ಭಾಗದಲ್ಲಿರುವಂತೆ ಹಾಗೂ ಶೇ.40 ರಷ್ಟು ಆಂಗ್ಲಭಾಷೆಯಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಕನ್ನಡ ನಾಮಫಲಕ ಕಡ್ಡಾಯಗೊಳಿಸುವುದಾಗಿ ಈ ಮೊದಲು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಆ ಬಳಿಕ ಫೆಬ್ರವರಿಯಲ್ಲಿ ನಡೆದ ಅಧಿವೇಶನದ ವೇಳೆ ಉಭಯ ಸದನಗಳಲ್ಲಿ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2024 ಅನ್ನು ಮಂಡಿಸಿ, ಅಂಗೀಕಾರ ಪಡೆದಿತ್ತು.

Leave a Reply

Your email address will not be published. Required fields are marked *