ನಿನ್ನೆಯಿಂದ ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಸ್ಥಗಿತ….!

ಶಿವಮೊಗ್ಗ : ಮುಂಗಾರು ಮಳೆ ವಿಳಂಬವಾಗಿದ್ದು ವಿದ್ಯುತ್ ಉತ್ಪಾದನೆ ಮೇಲೆ ಪ್ರಭಾವ ಬೀರಿದೆ. ಏಷ್ಯಾದಲ್ಲಿಯೇ ಅತಿ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಲಿಂಗನಮಕ್ಕಿ ಜಲಾಶಯದಲ್ಲಿ ಜಲ ವಿದ್ಯುತ್ ಉತ್ಪಾದನೆ ನಿನ್ನೆಯಿಂದ ಸ್ಥಗಿತವಾಗಿದೆ. ಇಲ್ಲಿ ಒಟ್ಟು 55 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು.

“ಲಿಂಗನಮಕ್ಕಿ ಜಲಾಶಯದಲ್ಲಿ ಒಟ್ಟು ನಾಲ್ಕು ಮಹಾತ್ಮ ಗಾಂಧಿ, ಶರಾವತಿ, ಶರಾವತಿ ಟೈಲ್ ಲೆಸ್ ಹಾಗೂ ಲಿಂಗನಮಕ್ಕಿ ವಿದ್ಯುತ್ ಘಟಕಗಳಿವೆ. ನೀರಿನ ಕೊರತೆಯಿಂದ ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ” ಎಂದು ಲಿಂಗನಮಕ್ಕಿ ಜಲಾಶಯದ ವಿದ್ಯುತ್ ಉತ್ಪಾದನೆಯ ಮುಖ್ಯ ಇಂಜಿನಿಯರ್ ನಾರಾಯಣ ಗಜಕೋಶ ಮಾಹಿತಿ ನೀಡಿದ್ದಾರೆ.

ಲಿಂಗನಮಕ್ಕಿ ಜಲಾಶಯವು 1819 ಅಡಿ ಎತ್ತರವಾಗಿದೆ. ಇದರಲ್ಲಿ ಹಾಲಿ 1741 ಅಡಿ ನೀರು ಸಂಗ್ರಹವಿದೆ. 1742 ಅಡಿಕ್ಕಿಂತ ನೀರು ಕಡಿಮೆಯಾದರೆ ಲಿಂಗನಮಕ್ಕಿ ಪವರ್ ಹೌಸ್ನಲ್ಲಿ ವಿದ್ಯುತ್ ಉತ್ಪಾದನೆ ಅಸಾಧ್ಯ. ಹೀಗಾಗಿ, ನೀರು ಲಭ್ಯವಾಗದ ಕಾರಣ ಪವರ್ ಹೌಸ್ ಸ್ಥಗಿತವಾಗಿದೆ. ಇದರಿಂದ ಇಂದಿನಿಂದ ರಾಜ್ಯಕ್ಕೆ 55 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕಡಿತಗೊಂಡಂತಾಗಿದೆ. ಹಾಲಿ ಜಲಾಶಯದಲ್ಲಿ ಕೇವಲ 8.1 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯವು ಒಟ್ಟು 156 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

ಇದರಲ್ಲಿ 5 ಟಿಎಂಸಿ ನೀರನ್ನು ಶರಾವತಿ ಜಲಾನಯನ ಭಾಗದ ಜನರ ಕುಡಿಯುವ ನೀರಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಂಗಾರು ಮಳೆ ಕೊರತೆ ಉಂಟಾದರೆ ಮುಂದಿನ 15 ದಿನಗಳಲ್ಲಿ ಲಿಂಗನಮಕ್ಕಿಯ ಎಲ್ಲಾ ವಿದ್ಯುತ್ ಗಾರಗಳು ತಮ್ಮ ಉತ್ಪಾದನೆಯನ್ನು ಸ್ಥಗಿತಗೊಳಿಸಲಿವೆ. ಇನ್ನೊಂದೆಡೆ, ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಮಡೇನೂರು ಅಣೆಕಟ್ಟೆ ಕಾಣಿಸಿಕೊಂಡಿದೆ.

ಶರಾವತಿ ನದಿಯ ಗರ್ಭದಲ್ಲಿ ಹುದುಗಿ ಹೋಗಿ 60 ವರ್ಷ ಕಳೆದರೂ ಕೂಡ ಮಡೇನೂರು ಅಣೆಕಟ್ಟೆ ಅಥವಾ ಹಿರೇಭಾಸ್ಕರ ಡ್ಯಾಂ ಇಂದಿಗೂ ತನ್ನ ಸೌಂದರ್ಯವನ್ನು ಉಳಿಸಿಕೊಂಡಿದೆ. ರಾಜ್ಯದಲ್ಲಿ ವಿದ್ಯುತ್ತಿನ ಬೇಡಿಕೆ ಹೆಚ್ಚಾದ ಕಾರಣ ಹಿಂದಿನ ಮೈಸೂರು ಅರಸರು ಲಿಂಗನಮಕ್ಕಿ ಬಳಿ ಅಣೆಕಟ್ಟೆ ನಿರ್ಮಾಣ ಮಾಡಿದರು. ಇದರಿಂದ ಶರಾವತಿ ನದಿಯ ಪ್ರಥಮ ಅಣೆಕಟ್ಟು ಮುಳುಗಡೆಯಾಗಿತ್ತು. ಮಡೇನೂರು ಅಣೆಕಟ್ಟೆಯ ಮೇಲೆ 41 ಅಡಿ ನೀರು ನಿಲ್ಲುತ್ತಿತ್ತು. ಆದರೆ ಈ ಬಾರಿ ಮುಂಗಾರು ವಿಳಂಬವಾದ ಕಾರಣ ಹಿರೇಭಾಸ್ಕರ ಡ್ಯಾಂ ಜನರ ಕಣ್ಣಿಗೆ ಗೋಚರಿಸುತ್ತಿದೆ.

Pragati TV Social Connect for more latest u

Leave a Reply

Your email address will not be published. Required fields are marked *