ಕರ್ನಾಟಕಕ್ಕೆ ನೆರೆ-ಹಾನಿ ನೆರವಿಗೆ ಕೇಂದ್ರ ಸರ್ಕಾರಕ್ಕೆ 1,545 ಕೋಟಿ ರೂ. ಮನವಿ.

ಕರ್ನಾಟಕಕ್ಕೆ ನೆರೆ-ಹಾನಿ ನೆರವಿಗೆ ಕೇಂದ್ರ ಸರ್ಕಾರಕ್ಕೆ 1,545 ಕೋಟಿ ರೂ. ಮನವಿ.

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ  ಮತ್ತು ಪ್ರವಾಹದಿಂದ ತೀವ್ರ ಹಾನಿ ಉಂಟಾಗಿರುವ ಹಿನ್ನಲೆ ಮೂಲಸೌಕರ್ಯ ಪುನರ್ ನಿರ್ಮಾಣಕ್ಕೆ ಕೇಂದ್ರದ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಸ್ತೆ, ಸೇತುವೆ, ಚೆಕ್ ಡ್ಯಾಂಗಳು ಸೇರಿ 5000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸಾರ್ವಜನಿಕ ಆಸ್ತಿ ನಷ್ಟ ಅಂದಾಜು ಮಾಡಿರುವ ಸರ್ಕಾರ, NDRF ಅಡಿಯಲ್ಲಿ 1545.23 ಕೋಟಿ ಆರ್ಥಿಕ ಸಹಾಯ ಕೋರಿ ಮನವಿ ಸಲ್ಲಿಸಲು ತೀರ್ಮಾನಿಸಿದೆ.

ಅತಿವೃಷ್ಟಿಯಿಂದ ಹಾನಿಯುಂಟಾಗಿರುವ ಹಿನ್ನೆಲೆ ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವಾಲಯವು ಎಸ್‌ಡಿಆರ್‌ಎಫ್‌ನಿಂದ 2ನೇ ಕಂತಿನ ಹಣವನ್ನು ಈಗಾಲೇ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಕೇವಲ 384.40 ಕೋಟಿ ರೂ.ಸಿಕ್ಕಿದ್ದರೆ, ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಬರೋಬ್ಬರಿ 1,566.40 ಕೋಟಿ ರೂ. ನೀಡಲಾಗಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್​ ಕಿಡಿ ಕಾರಿದ್ದು, ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿ ಕೇಂದ್ರ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಬಿಜೆಪಿ ಸರ್ಕಾರದ ಅವೈಜ್ಞಾನಿಕ ಜಿಎಸ್‌ಟಿ ಹೇರಿಕೆಯಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದ ರಾಜ್ಯಗಳ ತೆರಿಗೆ ಆದಾಯದಲ್ಲಿ‌ ದೊಡ್ಡ ಪ್ರಮಾಣದ ಕೊರತೆ ಎದುರಾಗಿದೆ. ಕರ್ನಾಟಕ ರಾಜ್ಯಕ್ಕೆ ಜಿಎಸ್‌ಟಿ ಪೂರ್ವದ ಆದಾಯ ವೃದ್ಧಿಯ ಪ್ರಮಾಣಕ್ಕೆ ಹೋಲಿಸಿದರೆ ಒಂದೇ ವರ್ಷದಲ್ಲಿ ರೂ.30,000 ಕೋಟಿಗೂ ಅಧಿಕ ನಷ್ಟವಾಗಿದೆ. ಕನ್ನಡಿಗರಿಗೆ, ರಾಜ್ಯಕ್ಕೆ ಶಾಪವಾಗಿರುವ ಕೇಂದ್ರ ಬಿಜೆಪಿ ಸರ್ಕಾರದಿಂದ ಅನುದಾನ ಹಂಚಿಕೆ, ಜಿಎಸ್‌ಟಿ ಪಾಲು, ನೆರೆ – ಬರ ಪರಿಹಾರ, ಅವೈಜ್ಞಾನಿಕ ನೀತಿಗಳು ಸೇರಿದಂತೆ ಪ್ರತಿಯೊಂದರಲ್ಲೂ ನಿರಂತರ ಅನ್ಯಾಯವಾಗುತ್ತಿದೆ ಎಂದು ಹೇಳಿದೆ.

ದೇಶದಲ್ಲೇ ಅತೀ ಹೆಚ್ಚು ತೆರಿಗೆ ನೀಡುವ, ಪ್ರತಿ ವರ್ಷ ದೇಶದ ಬೊಕ್ಕಸಕ್ಕೆ 4.5 ಲಕ್ಷ ಕೋಟಿ ರೂಪಾಯಿಗಳನ್ನು ತುಂಬಿಸುವ ಕರ್ನಾಟಕ್ಕೆ ಕೇಂದ್ರದಿಂದ ಸಿಗುತ್ತಿರುವುದು ಕನಿಷ್ಠ ಪಾಲು ಮಾತ್ರ. ಉತ್ತರ ಪ್ರದೇಶ – ಬಿಹಾರದಂತಹ ಭ್ರಷ್ಟಾಚಾರದಿಂದ ಬಳಲುತ್ತಿರುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿ ಕರ್ನಾಟಕಕ್ಕೆ ನಿರಂತರ ದ್ರೋಹ ಬಗೆಯಲಾಗುತ್ತಿದೆ. ಕೇಂದ್ರದ ಈ ತಾರತಮ್ಯ ನೀತಿಯನ್ನು ಖಂಡಿಸಬೇಕಾದ ರಾಜ್ಯದ ಬಿಜೆಪಿ ಸಂಸದರು ಧ್ವನಿ ಕಳೆದುಕೊಂಡವರಂತೆ ಮೌನಕ್ಕೆ ಶರಣಾಗಿದ್ದಾರೆ ಎಂದೂ ಆಡಳಿತಾರೂಢ ಕಾಂಗ್ರೆಸ್​ ಆರೋಪಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *