ಕನ್ನಡ ಕಲಿಕೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ – ಸುರೇಶ್ ಕುಮಾರ್ ಖಡಕ್ ಸಂದೇಶ

ಬೆಂಗಳೂರು : ಕನ್ನಡ ನೆಲದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸುವ ಸಂಬಂಧದ ಕನ್ನಡ ಕಲಿಕಾ ಅಧಿನಿಯಮ-2015ರ ಕಾಯ್ದೆ ಅನುಷ್ಠಾನದಲ್ಲಿ ಯಾವುದೇ ರಾಜಿಯೇ ಇಲ್ಲ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಹೊರನಾಡು ಕನ್ನಡಿಗರ ಒಂದು ವರ್ಗ ರಾಜ್ಯದಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದೆ  ಎಂಬ ಹಿನ್ನೆಲೆಯಲ್ಲಿ ಅಧಿನಿಯಮ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಬುಧವಾರ ತಮ್ಮನ್ನು ಭೇಟಿ ಮಾಡಿ ಮನವಿ ಮಾಡಿದ ನಂತರ ಮಾತನಾಡಿದ ಸಚಿವರು, ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳೇ ಆಗಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯವಾಗಿದ್ದು, ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಿದೆ ಎಂದು ಹೇಳಿದ್ದಾರೆ.

ಒಂದರಿಂದ ಹತ್ತನೇ ತರಗತಿಯವರಿಗೆ ಹಂತಹಂತವಾಗಿ ಕನ್ನಡ ಭಾಷೆಯನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸಬೇಕಿದೆ. ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಹೊರ ರಾಜ್ಯದ ಪೋಷಕರ ಒಂದು ವರ್ಗ ವಿರೋಧಿಸಿ ಈ ಕಡ್ಡಾಯ ಕನ್ನಡ ಕಲಿಕೆಯನ್ನು ಕೈಬಿಡಬೇಕೆಂದು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸುತ್ತಿದ್ದು, ಇದು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ಕ್ಕೆ ವಿರುದ್ಧವಾಗಿದೆ. ಅಲ್ಲದೇ ಈ ನೆಲದ ಸಂಸ್ಕೃತಿಯನ್ನು ವಿರೋಧಿಸುವಂತಹುದ್ದಾಗಿದೆ.  ಈ ಕುರಿತಂತೆ ರಾಜ್ಯದ ಯಾವುದೇ ಪಠ್ಯಕ್ರಮದ ಶಾಲೆಗಳು ಯಾವುದೇ ಆಗ್ರಹಕ್ಕೂ ಮಣಿಯದೇ ಕಟ್ಟುನಿಟ್ಟಾಗಿ ಕನ್ನಡ ಕಲಿಕೆಯನ್ನು  ಕಡ್ಡಾಯವಾಗಿ ಕಲಿಸುವುದಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಪೋಷಕರೂ ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಸರ್ಕಾರದ ಸದಾಶಯವನ್ನು ಗೌರವಿಸಬೇಕು. ತಮ್ಮ ಮಕ್ಕಳನ್ನು ನೆಲದ ಭಾಷೆ ಕಲಿಯಲು ಪ್ರೇರೇಪಿಸಬೇಕೆಂದು ಸಚಿವರು ಹೇಳಿದರು.

ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳೂ ಸಹ ಯಾವುದೇ ಆಗ್ರಹಗಳಿಗೆ ಮಣಿಯದೇ ಮತ್ತು ಕನ್ನಡ ಕಲಿಕೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿಗೆ ಒಳಗಾಗದೇ ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಅನ್ವಯ ಕನ್ನಡವನ್ನು ತಮ್ಮ ಶಾಲೆಗಳಲ್ಲಿ ಕಡ್ಡಾಯವಾಗಿ, ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಎಂದಿನಂತೆ ಮುಂದುವರೆಸುವುದು ಮತ್ತು ಈ ಕಾಯ್ದೆ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆ ನೀಡುವ ಕುರಿತು ಕೂಡಲೇ ಸುತ್ತೋಲೆಯೊಂದನ್ನು ಹೊರಡಿಸಬೇಕೆಂದು ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಆಯಾ ಮಟ್ಟದ ಇಲಾಖೆಯ ವಿಚಕ್ಷಣ ಅಧಿಕಾರಿಗಳು ಎಲ್ಲ ಶಾಲೆಗಳಿಗೂ ಭೇಟಿ ನೀಡಿ ಕಾಯ್ದೆಯ ಜಾರಿ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವಂತೆ ಸಹ ಕೂಡಲೇ ನಿರ್ದೇಶನ  ನೀಡಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.  ಈಗಾಗಲೇ ಬೆಂಗಳೂರಿನ ಕೇಂದ್ರ ಪಠ್ಯಕ್ರಮದ ಶಾಲೆಗಳ ಪ್ರಾಚಾರ್ಯರು ಮತ್ತು ಮುಖ್ಯಸ್ಥರ ಸಭೆಯನ್ನೂ ನಡೆಸಿ ಈ ಕುರಿತು ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯವಾಗಿ ಅನುಸರಿಸುವಂತೆ ನಿರ್ದೇಶನ ನೀಡಲಾಗಿದೆ. ಯಾರೇ ಆಗಲಿ ಯಾವುದೇ ಭಾಷೆಯನ್ನು ಕಲಿಯುವುದರಿಂದ ಹೆಚ್ಚಿನ ಶಕ್ತಿ ಬರುತ್ತದೆ. ಹೆಚ್ಚಿನ ಭಾಷೆಗಳನ್ನು ಕಲಿಯುವುದರಿಂದ ಸಮೃದ್ಧ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಂತಾಗುತ್ತದೆ. ಇದನ್ನು ನಮ್ಮ ಪೋಷಕರು ಅರಿತುಕೊಳ್ಳಬೇಕು  ಎಂದೂ ಅವರು ಹೇಳಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *