ಕರ್ನಾಟಕ || 7 ಹಿರಿಯ IAS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಕಳೆದ ತಿಂಗಳಷ್ಟೇ ಐಎಎಸ್‌ ಅಧಿಕಾರಿಗಳನ್ನು ದೊಡ್ಡ ಸಂಖ್ಯೆಯಲ್ಲಿ ವರ್ಗಾವಣೆ ಮಾಡಿದ್ದ ಕರ್ನಾಟಕ ಸರ್ಕಾರ ಈಗ ಮತ್ತೆ ಕೆಲವು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೆಲವು ಅಧಿಕಾರಿಗಳು ಹುದ್ದೆಯ ನಿರೀಕ್ಷೆಯಲ್ಲಿದ್ದರೆ, ಇನ್ನು ಕೆಲವರಿಗೆ ಹೊಸ ಹುದ್ದೆ ನೀಡಲಾಗಿದೆ.

ಅದರಲ್ಲೂ ಕರ್ನಾಟಕದ ದಕ್ಷ ಹಾಗೂ ಪ್ರಾಮಾಣಿಕ ಎಂಬ ಹೆಸರು ಪಡೆದಿರುವ ಮಹಿಳಾ ಅಧಿಕಾರಿಯೊಬ್ಬರಿಗೆ ಈ ಬಾರಿಯೂ ಹುದ್ದೆ ನೀಡಿಲ್ಲ. ಅದೂ ಅಲ್ಲಿಗೆ ಬಂದ ಕೆಲವೇ ತಿಂಗಳಲ್ಲಿ ವರ್ಗ ಮಾಡಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.ಹಿರಿಯ ಐಎಎಸ್‌ ಅಧಿಕಾರಿ ಖುಷ್ಬೂ ಜಿ. ಚೌಧರಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ಪ್ರಾದೇಶಿಕ ಆಯುಕ್ತರ ಜತೆಗೆ ಚಿನ್ನದ ಹಟ್ಟಿ ಗಣಿ ಎಂಡಿಯಾಗಿದ್ದ ಸಂಜಯ ಶೆಟ್ಟೆನ್ನವರ್ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಲಾಗಿದೆ

ದಾವಣಗೆರೆ ಜಿಲ್ಲೆಯ ಹುದ್ದೆಯಿಂದ ವರ್ಗಾವಣೆಗೊಂಡು ಹುದ್ದೆ ನಿರೀಕ್ಷೆಯಲ್ಲಿದ್ದ ಡಾ.ಎಂ.ವಿ.ವೆಂಕಟೇಶ್ ಅವರನ್ನು ಹಿಂದೂ ಧಾರ್ಮಿಕ ಮತ್ತು ದತ್ತಿಗಳ ಇಲಾಖೆ ಆಯುಕ್ತರಾಗಿ ನೇಮಕ ಮಾಡಲಾಗಿದೆ.ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ.ಸತೀಶ ಬಿ.ಸಿ. ಅವರನ್ನು ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆಯ ವಿಶೇಷ ಆಯುಕ್ತರನ್ನಾಗಿ ನಿಯೋಜನೆ ಮಾಡಲಾಗಿದೆ.

ಹಿಂದೂ ಧಾರ್ಮಿಕ ಮತ್ತು ದತ್ತಿಗಳ ಇಲಾಖೆ ಆಯುಕ್ತರಾಗಿದ್ದ ಬಸವರಾಜೇಂದ್ರ ಹೆಚ್. ಅವರನ್ನು ತೋಟಗಾರಿಕೆ ಇಲಾಖೆ ನಿರ್ದೇಶಕರಾಗಿ ನೇಮಿಸಲಾಗಿದೆ. ಈ ಹುದ್ದೆಯಲ್ಲಿದ್ದ ಡಿ.ಎಸ್‌. ರಮೇಶ್‌ ಅವರನ್ನು ಕಳೆದ ವಾರ ಮೈಸೂರು ಪ್ರಾದೇಶಿಕ ಆಯುಕ್ತರಾಗಿ ನೇಮಿಸಲಾಗಿತ್ತು.

ಕೆಪಿಎಸ್‌ಸಿ ಕಾರ್ಯದರ್ಶಿಯಾಗಿ ನಂತರ ಕರ್ನಾಟಕ ರೆಸಿಡೆನ್ಶಿಯಲ್ ಎಜುಕೇಶನ್ ಇನ್ಸ್​ಟಿಟ್ಯೂಷನ್​ ಸೊಸೈಟಿ (ಕೆಆರ್​ಇಐಎಸ್) ಕಾರ್ಯನಿರ್ವಾಹಕ ನಿರ್ದೇಶಕರಾಗಿ ವರ್ಗಗೊಂಡಿದ್ದ ಲತಾ ಕುಮಾರಿ ಕೆ.ಎಸ್. ಅವರನ್ನುಬೆಂಗಳೂರು ನಗರ ಜಿಲ್ಲೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಕಾಂತರಾಜು ಪಿ.ಎಸ್ ಅವರನ್ನು ಕರ್ನಾಟಕ ರೆಸಿಡೆನ್ಶಿಯಲ್ ಎಜುಕೇಶನ್ ಇನ್ಸ್​ಟಿಟ್ಯೂಷನ್​ ಸೊಸೈಟಿ (ಕೆಆರ್​ಇಐಎಸ್) ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗೆ ನಿಯೋಜಿಸಲಾಗಿದೆ.

ಆದರೆ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್‌ ಅಧಿಕಾರಿ ಜಿ.ಸತ್ಯವತಿ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ. ಈ ಹಿಂದೆ ಮೈಸೂರು ಜಿಲ್ಲಾಪಂಚಾಯಿತಿ ಸಿಇಒ, ಕೋಲಾರ ಹಾಗೂ ಚಿಕ್ಕಮಗಳೂರು ಡಿಸಿಯಾಗಿ ಒಳ್ಳೆಯ ಕೆಲಸ ಮಾಡಿದ ಹೆಸರಿರುವ ಹಾಗೂ ಕೆಪಿಎಸ್ಸಿ ಕಾರ್ಯದರ್ಶಿ ಹಾಗೂ ಬಿಎಂಟಿಸಿ ಎಂಡಿ ಹುದ್ದೆಯಿಂದ ಏಕಾಏಕಿ ವರ್ಗಗೊಳಿಸಿದ್ದ ಸತ್ಯವತಿ ಅವರು ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿಯಾಗಿ ಸ್ವಲ್ಪವೇ ಸಮಯವಾಗಿತ್ತು. ಬಿಎಂಟಿಸಿ ಎಂಡಿ ಹುದ್ದೆಯಿಂದ ವರ್ಗ ಮಾಡಿದಾಗಲೂ ಅವರಿಗೆ ಬೇರೆ ಹುದ್ದೆ ತೋರಿಸಿರಲಿಲ್ಲ. ಈಗ ಅವರಿಗೆ ಹುದ್ದೆ ತೋರಿಸದೇ ವರ್ಗ ಮಾಡಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *