ಕಾಸರಗೋಡು: ಕಳೆದ ಫೆ.12ರಂದು ಕಾಸರಗೋಡಿನ ಪೈವಳಿಗಾದಿಂದ ನಾಪತ್ತೆಯಾಗಿದ್ದ ಬಾಲಕಿ ಹಾಗೂ ನೆರೆಮನೆಯ ವ್ಯಕ್ತಿ ನೇಣು ಬಿಗಿದುಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
15 ವರ್ಷದ ಬಾಲಕಿ ಮತ್ತು 42 ವರ್ಷದ ವ್ಯಕ್ತಿಯ ಶವ ಪೈವಳಿಗಾದ ಬಾಲಕಿಯ ಮನೆ ಸಮೀಪ, ಮಂಡೆಕ್ಕಾಪ್ ಮೈದಾನದ ಪಕ್ಕದ ಅಕೇಶಿಯಾ ಮರದಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಎರಡು ಮೊಬೈಲ್ ಫೋನ್ ಮತ್ತು ಚಾಕು ದೊರೆತಿದೆ.
ಕೇರಳದ ಗಡಿ ಪ್ರದೇಶಗಳು ಸೇರಿದಂತೆ ವಿವಿಧ ಠಾಣೆಗಳ 52 ಸದಸ್ಯರ ಪೊಲೀಸ್ ತಂಡ ಹಾಗೂ ಸ್ಥಳೀಯರು ಸುಳ್ಯ ಭಾಗ ಸೇರಿದಂತೆ ಕರ್ನಾಟಕ, ಕಾಸರಗೋಡಿನ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ವ್ಯಾಪಕ ಶೋಧ ನಡೆಸುತ್ತಿದ್ದಾಗ ನಿನ್ನೆ ಶವ ಸಿಕ್ಕಿದೆ. ಮೃತಪಟ್ಟು ಅಂದಾಜು 25 ದಿನಗಳು ಆಗಿರಬಹುದೆಂದು ಪೊಲೀಸರು ಹೇಳಿದ್ದಾರೆ. ಬಾಲಕಿ ಕಾಣೆಯಾದಾಗ ಧರಿಸಿದ್ದ ಬಟ್ಟೆಯೇ ಮೃತದೇಹದ ಮೇಲೂ ಇದೆ. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಶ್ವಾನದಳ ಹಾಗೂ ಡ್ರೋನ್ ಮೂಲಕ ಶೋಧ ನಡೆಸಲಾಗಿತ್ತು. ಬಾಲಕಿಯ ಪೋಷಕರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಪೊಲೀಸರ ತನಿಖೆಯಲ್ಲಿ ಇಬ್ಬರ ಮೊಬೈಲ್ ಒಂದೇ ಸ್ಥಳದಲ್ಲಿ ಸ್ವಿಚ್ ಆಫ್ ಆಗಿರುವುದು ಕಂಡುಬಂದಿತ್ತು. ಸಾಕಷ್ಟು ವಿಸ್ತಾರವಾಗಿರುವ ಪ್ರದೇಶವಾದ್ದರಿಂದ ಮೊದಲ ಶೋಧದ ವೇಳೆ ಏನೂ ಪತ್ತೆಯಾಗಿರಲಿಲ್ಲ.
ಇಂದು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.