ರುದ್ರಪ್ರಯಾಗ: ಉತ್ತರ ಭಾರತದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಪವಿತ್ರಯಾತ್ರಾತಾಣ ಕೇದಾರನಾಥ ಟ್ರೆಕಿಂಗ್ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿ 8 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಧಾಮಕ್ಕೆ ಸಾಗುವ ದಾರಿಯಲ್ಲಿ ಭಾನುವಾರ ಗುಡ್ಡಕುಸಿದಿದೆ. ಈ ದುರ್ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ ಗೌರಿ ಕುಂಡ್– ಕೇದಾರನಾಥ ಮಾರ್ಗದ ಚಿರ್ಬಸಾ ಪ್ರದೇಶದ ಬಳಿ ಭಾನುವಾರ ಬೆಳಿಗ್ಗೆ 7.30ರ ಹೊತ್ತಿಗೆ ಭಾರಿ ಕಲ್ಲುಗಳಿಂದ ಕೂಡಿದ ಗುಡ್ಡ ಕುಸಿದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ತಲುಪಿದೆ. ಈವರೆಗೆ ಅವಶೇಷಗಳಲ್ಲಿ ಮೂರು ಮೃತದೇಹಗಳು ಪತ್ತೆಯಾಗಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಪುಷ್ಕರ್‌ಸಿಂಗ್ ಧಾಮಿ, ‘ಕೇದಾರನಾಥ ಯಾತ್ರೆಯ ಮಾರ್ಗದಲ್ಲಿ ಸಂಭವಿಸಿದ ದುರಂತ ವಿಷಾದನೀಯ. ರಕ್ಷಣಾ ತಂಡ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಮೃತರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ಟ್ವೀಟ್ ಮಾಡಿದ್ದಾರೆ