ಗುಬ್ಬಿ: ಗುಬ್ಬಿ ತಾಲೂಕಿನಾದ್ಯಂತ ಮುಂಗಾರು ವಿಫಲವಾಗಿದ್ದು, ರೈತರು ಇನ್ನು ಬಿತ್ತನೆ ಕಾರ್ಯ ಪ್ರಾರಂಭಿಸಿಲ್ಲ. ಇಲ್ಲಿ ಆಗಸ್ಟ್, ಸೆಪ್ಟೆಂಬರ್ನಲ್ಲಿ ರೈತರು ಕೃಷಿ ಚಟುವಟಿಕೆ ಪ್ರಾರಂಭಿಸುವುದರಿAದ ಗುಬ್ಬಿಯಲ್ಲಿ ರಸಗೊಬ್ಬರ ಕೊರತೆ ಉಂಟಾಗದು ಎಂದು ಜಿಲ್ಲಾ ಕೃಷಿ ಉಪ ನಿರ್ದೇಶಕ ಹುಲಿರಾಜು ತಿಳಿಸಿದರು.
ಗುಬ್ಬಿ ಪಟ್ಟಣದ ಹಲವು ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿ ಮಾತನಾಡಿದರು ಹಾಗೂ ಅಂಗಡಿ ಮಾಲೀಕರು ಕಾಳಸಂತೆಯಲ್ಲಿ ಮಾರಾಟ ಮಾಡಬಾರದು. ರೈತರಿಗೆ ಕೃತಕ ಅಭಾವ ಸೃಷ್ಟಿಸಬಾರದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಳೆದ ವಾರ ರಾಜ್ಯಾದ್ಯಂತ ರಸಗೊಬ್ಬರ ಕೊರತೆಯಿದೆಯೆಂದು ರೈತರು ಹಾಗೂ ಬಿಜೆಪಿ ಪಕ್ಷದಿಂದ ಮುಷ್ಕರ ಮಾಡಿದ್ದರು. ಗಮನಿಸಿದ್ದ ಅಧಿಕಾರಿಗಳು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ದಾಸ್ತಾನನ್ನು ಪರಿಶೀಲಿಸುತ್ತಿದ್ದಾರೆ.
ಗುಬ್ಬಿ ತಾಲೂಕಿಗೆ 621 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರದ ಅವಶ್ಯಕತೆ ಇದ್ದು ಈಗಾಗಲೇ 521 ಮೆಟ್ರಿಕ್ ಟನ್ ದಾಸ್ತಾನು ಇದೆ. ಉಳಿದ ರಸ ಗೊಬ್ಬರ ಬರುತ್ತದೆ ಎಂದು ಕೃಷಿ ಸಹಾಯಕ ನಿರ್ದೇಶಕ ಜಗನ್ನಾಥ್ ಗೌಡ ಈ ಸಂದರ್ಭದಲ್ಲಿ ತಿಳಿಸಿದರು. ಈ ವೇಳೆ ಕೃಷಿ ಅಧಿಕಾರಿ ಪ್ರಕಾಶ್ ಹಾಗೂ ಇತರರು ಇದ್ದರು.