ಬೆಂಗಳೂರು: ನೀರಿನ ಬಿಲ್ ಏರಿಕೆ ಮಾಡುವುದಾಗಿ ಶಾಕ್ ನೀಡಿದ್ದ ರಾಜ್ಯ ಸರ್ಕಾರ, ಜನತೆ ಸುಧಾರಿಸಿಕೊಳ್ಳುವ ಮೊದಲೇ ಇದೀಗ ಮತ್ತೊಂದು ಶಾಕ್ ನೀಡಿದೆ.
ಕೆಎಸ್ಆರ್’ಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಸುಳಿವನ್ನು ಸಾರಿಗೆ ಸಚಿವ ರಾಮಲಿಂಗಾ ರಡ್ಡಿಯವರು ಶನಿವಾರ ನೀಡಿದ್ದಾರೆ.
ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (KERC) ಮಾದರಿಯಲ್ಲೇ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಏರಿಕೆ ನಿರ್ಧಾರಗಳನ್ನು ಕೈಗೊಳ್ಳಲು ಪ್ರತ್ಯೇಕ ನಿಯಂತ್ರಣ ಆಯೋಗ (KTRC) ರಚನೆಗೆ ಸರ್ಕಾರ ಮುಂದಾಗಿದೆ ಎಂಬ ಪತ್ರಿಕೆಯ ವರದಿ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕರ ಆರ್.ಅಶೋಕ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಬಸ್ ದರ ಏರಿಕೆಗೆ ಪ್ರತ್ಯೇಕ ಆಯೋಗ ರಚಿಸಿ ಪಿಕ್ ಪಾಕೆಟ್ ಗಾಗಿ ಹೊಸ ಪ್ರಯೋಗ ಮಾಡಲು ಹೊರಟಿದೆ. ಆಡಳಿತ ಮಾಡುವಲ್ಲಿ ಮೂರು ಕಾಸು ಪ್ರಯೋಜನ ಇಲ್ಲದಿದ್ದರೂ ಜನರಿಗೆ ಮಂಕು ಬೂದು ಎರಚಿ ಹೊಸ ಪ್ರಯೋಗಗಳ ಮೂಲಕ ಜನರನ್ನ ಸುಲಿಗೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷದವರು ಬಹಳ ನಿಸ್ಸೀಮರು ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಮಲಿಗಾ ರೆಡ್ಡಿಯವರು, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಕೆಎಸ್ಆರ್’ಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಸುಳಿವನ್ನೂ ನೀಡಿದ್ದಾರೆ.