ಹುಚ್ಚಾಸ್ಪತ್ರೆಯಲ್ಲಿ ಕುಮಾರಸ್ವಾಮಿಗೆ ಆದಷ್ಟು ಬೇಗ ಚಿಕಿತ್ಸೆ ಕೊಡಿಸಬೇಕು : ಡಿಸಿಎಂ ಡಿ.ಕೆ. ಶಿವಕುಮಾರ್

HDK again attacked DCM

HDK Against DCM DK Shivkumar

ಕುಮಾರಸ್ವಾಮಿ ಅವರ ಹೇಳಿಕೆ ನೋಡುತ್ತಿದ್ದರೆ ಅವರಿಗೆ ಆದಷ್ಟು ಬೇಗ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕನಕಪುರದಲ್ಲಿ ಜನರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಶನಿವಾರ ಪ್ರತಿಕ್ರಿಯೆ ನೀಡಿದರು.

ಎಸ್.ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ ಅವರ ಸಾವಿಗೆ ಕಾರಣ ಯಾರು ಎಂದು ನಿಮ್ಮ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂದು ಮಾಧ್ಯಮಗಳು ಕೇಳಿದಾಗ, “ನಾನು ಅವರ ತಂದೆ ವಿರುದ್ಧ 1985ರಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಬಂಗಾರಪ್ಪನವರ ಸಂಪುಟದಲ್ಲಿ ಸಚಿವನಾಗಿದ್ದೆ. ನನ್ನ ಹಾಗೂ ಎಸ್.ಎಂ ಕೃಷ್ಣ ಅವರ ನಡುವಣ ಸಂಬಂಧ ಏನು ಎಂದು ಕುಮಾರಸ್ವಾಮಿಗೆ ಏನು ಗೊತ್ತಿದೆ? ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಅವರ ಪಕ್ಷದವರಿಗೆ, ನಾಯಕರಿಗೆ, ಹಿತೈಷಿಗಳಿಗೆ ಹೇಳೋಣ” ಎಂದು ತಿಳಿಸಿದರು.

ಡಿ.ಕೆ ಶಿವಕುಮಾರ್ ಬಡವರ ಆಸ್ತಿ ಲೂಟಿ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಗಮನ ಸೆಳೆದಾಗ, “ನಾನು ಯಾವ ಬಡವನ ಆಸ್ತಿ ಲೂಟಿ ಮಾಡಿದ್ದೇನೆ. ಆತನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಲಿ. ನಾವು ಬಡವರಿಗೆ ತೊಂದರೆ ನೀಡಿ ಆಸ್ತಿ ಕಿತ್ತುಕೊಂಡಿರುವುದು ನಮ್ಮ ಜಾಯಮಾನದಲ್ಲಿಲ್ಲ. ಕುಮಾರಸ್ವಾಮಿ ಅವರ ಬಗ್ಗೆ ಯೋಗೇಶ್ವರ್ ಅವರೇ ಈಗಾಗಲೇ ಮಾಹಿತಿ ನೀಡಿದ್ದಾರೆ. ಅವರ ಬಗ್ಗೆ ಯೋಗೇಶ್ವರ್ ಉತ್ತರ ನೀಡುತ್ತಾರೆ” ಎಂದು ತಿಳಿಸಿದರು.

ಶಿವಕುಮಾರ್ ಅವರಿಗೆ ರಾಜಕೀಯಕ್ಕೆ ಬಂದ ಮೇಲೆ ಆಸ್ತಿ ಬಂದಿದೆ. ಅವರ ತಂದೆ ಏನಾಗಿದ್ದರು ಎಂಬ ಪ್ರಶ್ನೆಗೆ, “ನಾವು ಬಡವರು, ಹೊಲ ಉಳುಮೆ ಮಾಡಿಕೊಂಡಿದ್ದೆವು. ನಾನು ಬೆಂಗಳೂರಿನ ಎನ್ ಪಿಎಸ್ ಶಾಲೆಯಲ್ಲಿ ಓದಿದವನು. ನನ್ನ ಇತಿಹಾಸ ಅಲ್ಲಿಂದ ಶುರುವಾಗಿದೆ” ಎಂದು ತಿಳಿಸಿದರು.

ನಿಮ್ಮನ್ನು ಜೈಲಿಗೆ ಹಾಕಲು ಷಡ್ಯಂತ್ರ ನಡೆಯುತ್ತಿದೆಯೇ ಎಂದು ಕೇಳಿದಾಗ, “ಮೊದಲಿಂದಲೂ ದೊಡ್ಡ ಸಂಚು ನಡೆದುಕೊಂಡು ಬಂದಿದ್ದು, ಈಗಲೂ ಷಡ್ಯಂತ್ರ ಮಾಡುತ್ತಿದ್ದಾರೆ. ಹೀಗಾಗಿ 10 ತಿಂಗಳಲ್ಲಿ ಸರ್ಕಾರ ತೆಗೆಯುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು.

ಶಿವಕುಮಾರ್ ನನ್ನ ಮೇಲೆ ಕಲ್ಲು ಬಂಡೆ ಎತ್ತಿಹಾಕಿದ್ದಾರೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, “ನಾನು ಯಾವ ರೀತಿ ಅವರ ಮೇಲೆ ಬಂಡೆ ಹಾಕಿದ್ದೇನೆ ಎಂದು ಅವರು, ಅವರ ಪಕ್ಷದ ನಾಯಕರು ಹೇಳಲಿ. ಅವರ ಮಾತುಗಳನ್ನು ಕೇಳುತ್ತಿದ್ದರೆ, ಅವರಿಗೆ ಚಿಕಿತ್ಸೆ ಕೊಡಿಸುವುದು ಉತ್ತಮ” ಎಂದರು.

ಸಿಎಂ ಸದನದಲ್ಲಿ ಉತ್ತರ ನೀಡದೇ ರಣಹೇಡಿಯಂತೆ ಕದ್ದು ಓಡಿ ಹೋಗುತ್ತಾರೆ ಎಂಬ ವಿಜಯೇಂದ್ರ ಆರೋಪದ ಬಗ್ಗೆ ಕೇಳಿದಾಗ, “ಹೇಡಿ ಯಾರು ಎಂಬುದನ್ನು ಸದನದಲ್ಲಿ ಬಂದು ಮಾತನಾಡಲಿ” ಎಂದು ತಿಳಿಸಿದರು.

ಕುಮಾರಸ್ವಾಮಿ ಮೇಲೆ ಕಣ್ಣಾಕಿದರೆ ಸರ್ವನಾಶವಾಗ್ತಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಮೇಲೆ ಕಣ್ಣಾಕಿದರೂ ಅದೇ ಸಮಸ್ಯೆ ಆಗುತ್ತದೆಯಲ್ಲವೇ” ಎಂದು ತಿಳಿಸಿದರು.

Leave a Reply

Your email address will not be published. Required fields are marked *