ಕುಂಭಮೇಳ || 30 ಕೋಟಿ ಭಕ್ತರ ಆಗಮನ ನಿರೀಕ್ಷೆ : ವಿಶೇಷ ರೈಲು ಓಡಿಸಲು ಸಿದ್ಧತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನವದೆಹಲಿ: ಕುಂಭಮೇಳಕ್ಕಾಗಿ ರೈಲ್ವೆ ಸಚಿವಾಲಯ ವ್ಯಾಪಕ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಜನವರಿಯಲ್ಲಿ ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಈ ಬೃಹತ್ ಧಾರ್ಮಿಕ ಮೇಳಕ್ಕಾಗಿ 992 ವಿಶೇಷ ರೈಲುಗಳನ್ನು ಓಡಿಸಲು ಯೋಜಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶೇಷ ರೈಲುಗಳನ್ನು ಓಡಿಸುವುದರ ಜೊತೆಗೆ, ಪ್ರಯಾಣಿಕರಿಗೆ ವಿವಿಧ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಲು ಮತ್ತು ನವೀಕರಿಸಲು ಸಚಿವಾಲಯವು 933 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.

ರೈಲುಗಳ ಸುಗಮ ಸಂಚಾರಕ್ಕಾಗಿ ಪ್ರಯಾಗರಾಜ್ ವಿಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 3,700 ಕೋಟಿ ರೂ.ಗಳ ವೆಚ್ಚದಲ್ಲಿ ರೈಲ್ವೆ ಹಳಿಗಳನ್ನು ಡಬ್ಲಿಂಗ್ ಮಾಡಲಾಗುತ್ತಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಇಬ್ಬರು ರಾಜ್ಯ ಸಚಿವರಾದ ರವ್ನೀತ್ ಸಿಂಗ್ ಬಿಟ್ಟು ಮತ್ತು ವಿ ಸೋಮಣ್ಣ ಅವರು ಶನಿವಾರ ಸಭೆ ನಡೆಸಿ ಜನವರಿ 12 ರಿಂದ ಪ್ರಾರಂಭವಾಗಲಿರುವ ಮೇಳದಲ್ಲಿ ಭಕ್ತರ ಭಾರಿ ದಟ್ಟಣೆಯನ್ನು ನಿಭಾಯಿಸುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.

“ಸಚಿವರುಗಳು ಉತ್ತರ ರೈಲ್ವೆ, ಉತ್ತರ ಮಧ್ಯ ರೈಲ್ವೆ ಮತ್ತು ಈಶಾನ್ಯ ರೈಲ್ವೆಯಂತಹ ಸಂಬಂಧಿತ ವಲಯಗಳ ಜನರಲ್ ಮ್ಯಾನೇಜರ್​ಗಳು ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ನಿಯಮಿತವಾಗಿ ವಿಡಿಯೋ ಕಾನ್ಫರೆನ್ಸ್ ನಡೆಸಿ ಪೂರ್ವಸಿದ್ಧತಾ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ” ಎಂದು ಅಧಿಕಾರಿ ಹೇಳಿದರು.

ಪ್ರಯಾಗ್ ರಾಜ್, ವಾರಣಾಸಿ, ದೀನ್ ದಯಾಳ್ ಉಪಾಧ್ಯಾಯ ಮತ್ತು ಲಕ್ನೋ ಮುಂತಾದ ರೈಲ್ವೆ ವಿಭಾಗಗಳ ವಿಭಾಗೀಯ ವ್ಯವಸ್ಥಾಪಕರು ಸಹ ಈ ಸಭೆಗಳಲ್ಲಿ ಭಾಗವಹಿಸಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *