ಬೆಳಗಾವಿ: ಅಂಗನವಾಡಿ ಕಾರ್ಯಕರ್ತೆಯರಿಂದ ಒಂದು ಲಕ್ಷ ರೂಪಾಯಿ ಹಣ ಪಡೆದ ಶಾಪ ಲಕ್ಷ್ಮೀ ಹೆಬ್ಬಾಳ್ಕರ್ಗೆ ತಟ್ಟಿದೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಸಮ್ಮುಖದಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ತಿರುಗೇಟು ಕೊಟ್ಟರು.
ಬೆಳಗಾವಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್, ಸೀರೆ, ಮೆಡಿಸಿನ್ ಕಿಟ್ ವಿತರಿಸಿ ಮಾತನಾಡಿದ ಹೆಬ್ಬಾಳ್ಕರ್, “ಅಂಗನವಾಡಿ ಕಾರ್ಯಕರ್ತೆಯರ ಬಳಿ ನಾನು ಹಣ ಪಡೆದಿದ್ದೇನಾ” ಎಂದು ಪ್ರಶ್ನಿಸಿದರು. ಹಣ ಪಡೆದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಜೋರು ಧ್ವನಿಯಲ್ಲಿ ಉತ್ತರಿಸಿದರು. “ಲಕ್ಷ್ಮೀ ಹೆಬ್ಬಾಳ್ಕರ್ ಅಂಗನವಾಡಿ ಕಾರ್ಯಕರ್ತೆಯರ ಬಳಿ ಒಂದು ಲಕ್ಷ ಪಡೆದಿದ್ದಾರೆ ಅಂತಾ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆದರೆ, ನಾನು ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಗನ ಭವಿಷ್ಯಕ್ಕಾಗಿ ಹೋರಾಡುವುದು ತಪ್ಪಾ?: ವೇದಿಕೆ ಮೇಲೆ ಮಗನ ಸೋಲನ್ನು ನೆನೆದ ಲಕ್ಷ್ಮೀ ಹೆಬ್ಬಾಳ್ಕರ್, “ಮಗ ಸೋತ ಮೇಲೆ ಮೌನವಾಗಿದ್ದಾರೆ ಅಂತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಒಬ್ಬ ತಾಯಿ ಅಲ್ಲವೇ? ಮಗನ ಭವಿಷ್ಯಕ್ಕಾಗಿ ನಾನು ಹೋರಾಟ ಮಾಡೋದು ತಪ್ಪಾ? ಮಕ್ಕಳ ಭವಿಷ್ಯ ಹೆಚ್ಚು ಕಡಿಮೆ ಆದಾಗ, ಮಕ್ಕಳು ಬಿದ್ದಾಗ ಸಂಕಟ ಆಗುತ್ತದೆ. ಹಾಗೆಯೇ ನನಗೂ ಸಂಕಟ ಆಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಗಟ್ಟಿಗಿತ್ತಿ, ಆದ್ರೆ ಒಬ್ಬ ತಾಯಿ ಕೂಡಾ. ಆದರೆ ಸಂಕಟವಾಗಿದೆ ಅಂತ ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ. ಈಗ ಮಗ ಬಿದ್ದಿದ್ದಾನೆ, ಬಿದ್ದೋನು ಮತ್ತೆ ಮೇಲೆ ಏಳುವುದು ಸಹಜ ಪ್ರಕೃತಿ ನಿಯಮ” ಎಂದರು.
“ಮಾನ-ಮರ್ಯಾದೆ ಎಲ್ಲಾ ಹರಾಜು ಹಾಕಿದ್ರು. ಆದರೂ ಕೂಡ ಯಾವುದಕ್ಕೂ ನಾನು ಜಗ್ಗಲಿಲ್ಲ. ನೀವೆಲ್ಲ ನಮಗೆ ಶಕ್ತಿ, ನಿಮ್ಮೆಲ್ಲರ ಸಹಕಾರ ಇಲಾಖೆಗೆ ಮುಖ್ಯ. ಇಲಾಖೆಗೆ ನೀವೆಲ್ಲ ಸ್ಫೂರ್ತಿ. ಯಾರು ಎಷ್ಟೇ ಹೇಳಿದರೂ ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡೋಣ” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.