ಕೃಷ್ಣಭೈರೇಗೌಡ ವಿರುದ್ಧ ಗಂಭೀರ ಆರೋಪ.
ಕೋಲಾರ: ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೋಲಾರ ತಾಲೂಕು ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಾವಲು ಕುಳಿತ ಘಟನೆ ನಡೆದಿದೆ. ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿಯ ಮುಂದೆ ಜಮಾಯಿಸಿ ದಾಖಲೆಗಳನ್ನು ರಕ್ಷಿಸುವ ಉದ್ದೇಶದಿಂದ ಇಡೀ ರಾತ್ರಿ ಕಾವಲು ಕಾದಿದ್ದಾರೆ. ತನಿಖೆ ನಡೆಯುವವರೆಗೆ ದಾಖಲೆಗಳನ್ನು ತಿದ್ದುವ ಅಥವಾ ಪ್ರಭಾವ ಬಳಸಿ ಕಡತಗಳನ್ನು ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು, ಎಲ್ಲ ಸರ್ಕಾರಿ ದಾಖಲೆಗಳನ್ನು ಸುರಕ್ಷಿತವಾಗಿ ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಬಿಜೆಪಿ ಶಾಸಕ ಛಲವಾದಿ ನಾರಾಯಣಸ್ವಾಮಿ, ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಹುಟ್ಟೂರು ಗರುಡಪಾಳ್ಯದಲ್ಲಿ ಸರ್ಕಾರಿ ಖರಾಬು ಜಮೀನನ್ನು ಕಬಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಸರ್ವೆ ನಂಬರ್ 46 ಮತ್ತು 47ರಲ್ಲಿ ಒಟ್ಟು 21 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗಿದೆ ಎಂಬುದು ಅವರ ಆರೋಪವಾಗಿದೆ. ಈ ಆರೋಪಗಳ ಹಿನ್ನೆಲೆ ಕೋಲಾರ ತಾಲೂಕು ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಕಾವಲು ಮುಂದುವರಿದಿದೆ.
For More Updates Join our WhatsApp Group :




