ಜಮ್ಮು: ಅಖಂಡ ಭಾರತದಿಂದ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗಿಸಿದ್ದ 370ನೇ ವಿಧಿಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿ ಎಲ್ಲರನ್ನೂ ಒಗ್ಗೂಡಿಸಿತ್ತು. ಇದೀಗ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಯು ವಿಶೇಷಾಧಿಕಾರವನ್ನು ಮರಳಿ ಸ್ಥಾಪಿಸುವುದಾಗಿ ಹೇಳುತ್ತಿವೆ. ಈ ಮೂಲಕ ದೇಶವನ್ನು ಮತ್ತೆ ಒಡೆಯಲು ಯತ್ನಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದರು.
ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ಅವರು, ಕಾಂಗ್ರೆಸ್ ಮತ್ತು ಎನ್ಸಿ ಮೈತ್ರಿಯನ್ನು ಟೀಕಿಸಿದರು. 370ನೇ ವಿಧಿಯನ್ನು ಮರು ಸ್ಥಾಪಿಸಲು ಪ್ರತಿಪಕ್ಷಗಳ ಮೈತ್ರಿ ಯತ್ನಿಸುತ್ತಿದೆ. ಬಿಜೆಪಿ ಇರುವವರೆಗೂ ಅದು ಸಾಧ್ಯವಿಲ್ಲ ಎಂದು ಖಡಕ್ ಆಗಿ ನುಡಿದರು.
ಕಣಿವೆಯಲ್ಲಿ ಸರ್ಕಾರ ರಚನೆಗೆ ಜನರು ಬಿಜೆಪಿಯನ್ನು ಬೆಂಬಲಿಸಬೇಕು. ಇದರಿಂದ ಈ ಪ್ರದೇಶದಲ್ಲಿ ಬೃಹತ್ ಅಭಿವೃದ್ಧಿಗೆ ಅನುಕೂಲವಾಗಲಿದೆ. ಇದನ್ನು ಕಂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ನಾವು ಪಾಕಿಸ್ತಾನದೊಂದಿಗೆ ಸೇರಬಾರದು ಎಂದು ಅಸೂಯೆಪಡಬೇಕು. ಭಾರತದಲ್ಲಿ ಮತ್ತೆ ವಿಲೀನವಾಗಲು ಹಾತೊರೆಯಬೇಕು ಎಂದು ರಕ್ಷಣಾ ಸಚಿವರು ಹೇಳಿದರು.
ಭಾರತದೊಂದಿಗೆ ಸೇರಲು ಪಿಒಕೆಗೆ ಆಫರ್: ಪಾಕಿಸ್ತಾನ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಒಕೆಯನ್ನು ವಿದೇಶಿ ಭೂಪ್ರದೇಶ ಎಂದು ಅಫಿಡವಿಟ್ ಸಲ್ಲಿಸಿದ್ದನ್ನು ಪ್ರಸ್ತಾಪಿಸಿದ ಕೇಂದ್ರ ಸಚಿವರು, “ಪಾಕಿಸ್ತಾನವು ಪಿಒಕೆ ಜನರನ್ನು ವಿದೇಶಿಯರು ಎಂದು ಪರಿಗಣಿಸುತ್ತಿದೆ. ಹೀಗಾಗಿ ನೀವು ಭಾರತಕ್ಕೆ ಸೇರ್ಪಡೆಯಾಗಿ ನಿಮ್ಮನ್ನು ಪಾಕ್ ಕಂಡಂತೆ ನಾವು ಕಾಣುವುದಿಲ್ಲ. ನಾವು ನಿಮ್ಮನ್ನು ನಮ್ಮವರೆಂದು ಪರಿಗಣಿಸುತ್ತೇವೆ. ನಮ್ಮೊಂದಿಗೆ ಬಂದು ಸೇರಿಕೊಳ್ಳಿ ಎಂದು ಸಲಹೆ ನೀಡಿದರು.
2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯು ಭಾರೀ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ. ಇಲ್ಲಿನ ಯುವಕರ ಪಿಸ್ತೂಲ್ ಮತ್ತು ರಿವಾಲ್ವರ್‌ಗಳ ಬದಲಿಗೆ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳಿವೆ. ಬದಲಾವಣೆ ಎಂದರೆ ಇದೇ ಅಲ್ಲವೆ?. ಇದನ್ನು ಮುಂದುವರಿಸಲು ಬಿಜೆಪಿ ಸರ್ಕಾರ ರಚನೆಯಾಗಬೇಕಿದೆ ಎಂದರು.
ಭಯೋತ್ಪಾದನೆ ನಿಲ್ಲಿಸಿದರೆ ಮಾತುಕತೆಗೆ ಸಿದ್ಧ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿಲ್ಲಿಸಿದರೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಭಾರತ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ವಿಪಕ್ಷಗಳು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಬಯಸುತ್ತಿವೆ. ಆದರೆ, ನೆರೆ ರಾಷ್ಟ್ರ ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಅದರಲ್ಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಪ್ರಾಯೋಜಿಸುವುದನ್ನು ಪಾಕಿಸ್ತಾನ ನಿಲ್ಲಿಸಿದಾಗ ಮಾತ್ರ ಮಾತುಕತೆಯನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದರು.
ನೆರೆಯ ದೇಶಗಳೊಂದಿಗೆ ಸಂಬಂಧವನ್ನು ಸುಧಾರಿಸಲು ಯಾರು ಬಯಸುವುದಿಲ್ಲ? ಸ್ನೇಹಿತರನ್ನು ಬದಲಾಯಿಸಬಹುದು, ನೆರೆಹೊರೆಯವರನ್ನಲ್ಲ ಎಂಬ ವಾಸ್ತವತೆ ಗೊತ್ತಿದೆ. ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ. ಆದರೆ, ಮೊದಲು ಆ ದೇಶ ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಅಲ್ಲಿಯವರೆಗೂ ಮಾತುಕತೆಗಳು ಸಾಧ್ಯವಿಲ್ಲ ಎಂದರು




