ಪಾದಯಾತ್ರಿಕರಲ್ಲಿ ಭೀತಿ ಹೆಚ್ಚಳ
ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಆಗಮಿಸುವ ಮಾದಪ್ಪನ ಭಕ್ತರಲ್ಲಿ ಚಿರತೆ ಭೀತಿ ಹೆಚ್ಚಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಭಕ್ತರಲ್ಲಿ ಆತಂಕ ಮನೆ ಮಾಡಿದೆ. ರಸ್ತೆಯ ಬದಿಯಲ್ಲೇ ಇರುವ ಸೇತುವೆ ಮೇಲೆ ಚಿರತೆ ಗಂಟೆಗಟ್ಟಲೆ ಕುಳಿತಿದೆ ಎನ್ನಲಾಗಿದೆ. ಚಿರತೆ ರಸ್ತೆ ಬದಿ ಇರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿರತೆ ಕಾಣಿಸಿರುವುದರಿಂದಾಗಿ ಇದೀಗ ಪಾದಯಾತ್ರೆ ಮೂಲಕ ಸಾಗುತ್ತಿದ್ದ ಭಕ್ತರು ಭಯಭೀತರಾಗಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲೇ ಆಗಮಿಸುವುದರಿಂದ ಎಚ್ಚರ ವಹಿಸಲೇಬೇಕಾದ ಸನ್ನಿವೇಶ ಎದುರಾಗಿದೆ.
ತಾಳಬೆಟ್ಟ ಮಾರ್ಗವು ಭಕ್ತರ ಪಾದಯಾತ್ರೆಗೆ ಪ್ರಮುಖ ದಾರಿಯಾಗಿದ್ದು, ಚಿರತೆ ಕಾಣಿಸಿಕೊಂಡ ಬಳಿಕ ಭಕ್ತರು ಭಯದಲ್ಲಿ ಸಾಗುವಂತಾಗಿದೆ. ವಿಶೇಷವಾಗಿ ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ಅಪಾಯ ಹೆಚ್ಚಿರುವುದರಿಂದ, ಮಕ್ಕಳು, ವೃದ್ಧರು ಹಾಗೂ ಮಹಿಳಾ ಭಕ್ತರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು, ಭಕ್ತರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ಅಲ್ಲದೆ, ಚಿರತೆಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿಗೆ ಮನವಿ ಸಲ್ಲಿಸಲಾಗಿದೆ.
For More Updates Join our WhatsApp Group :




