ವಾಹನಗಳ ಅಬ್ಬರಕ್ಕೆ ಬಲಿಯಾಗುತ್ತಿರುವ ಚಿರತೆಗಳು!

ವಾಹನಗಳ ಅಬ್ಬರಕ್ಕೆ ಬಲಿಯಾಗುತ್ತಿರುವ ಚಿರತೆಗಳು!

14 ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ 149 ಚಿರತೆ ಸಾ* – ಅಪಘಾತಗಳೇ ಪ್ರಮುಖ ಕಾರಣ.

ಭೋಪಾಲ್ : ಕಾಡುಪ್ರಾಣಿಗಳ ಪಾಲಿಗೆ ಮನುಷ್ಯರು ಯಮಕಿಂಕರರಾಗುತ್ತಿದ್ದಾರೆ. ಇತ್ತೀಚೆಗೆ ಅಭಯಾರಣ್ಯದ ರಸ್ತೆಯೊಂದರಲ್ಲಿ ಚಿರತೆ ನಡೆದುಕೊಂಡು ಹೋಗುವಾಗ ಅದರ ಪಕ್ಕದವರೆಗೂ ಸಾಲುಗಟ್ಟಿ ವಾಹನಗಳನ್ನು ನಿಲ್ಲಿಸಿಕೊಂಡು ಫೋಟೋ ಕ್ಲಿಕ್ಕಿಸುತ್ತಾ, ಆ ಚಿರತೆಗೆ ಹೋಗಲು ದಾರಿಯನ್ನೂ ಬಿಡದೆ ಗೊಂದಲವನ್ನುಂಟುಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಕಾಡುಪ್ರಾಣಿಗಳ ಖಾಸಗಿತನಕ್ಕೆ ಸಫಾರಿಯ ಹೆಸರಿನಲ್ಲಿ ಯಾವ ರೀತಿ ತೊಂದರೆ ಮಾಡಲಾಗುತ್ತಿದೆ ಎಂಬ ಕುರಿತು ಸಾಕಷ್ಟು ಚರ್ಚೆಗಳಿಗೂ ಈ ವಿಡಿಯೋ ಕಾರಣವಾಗಿತ್ತು. ಇದೀಗ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯ ಪ್ರಕಾರ ಮಧ್ಯಪ್ರದೇಶದಲ್ಲಿ ಕಳೆದ 14 ತಿಂಗಳಲ್ಲಿ 149 ಚಿರತೆಗಳು ಮೃತಪಟ್ಟಿರುವ ಶಾಕಿಂಗ್ ಸಂಗತಿ ಬಯಲಾಗಿದೆ. ಈ ಸಾವಿಗೆ ಬಹುತೇಕವಾಗಿ ಅಪಘಾತಗಳೇ ಮುಖ್ಯ ಕಾರಣ ಎಂಬುದು ಇನ್ನೊಂದು ಆಘಾತಕಾರಿ ಸಂಗತಿ.

ಜನವರಿ 2025ರಿಂದ ಆರಂಭವಾದ 14 ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ 149 ಚಿರತೆಗಳು ಸಾವನ್ನಪ್ಪಿವೆ ಎಂದು ಇಲಾಖೆ ತನ್ನ ಆರ್‌ಟಿಐ ಉತ್ತರದಲ್ಲಿ ತಿಳಿಸಿದೆ. ಇವುಗಳಲ್ಲಿ ಶೇ. 31ರಷ್ಟು ಸಾವುಗಳು ರಸ್ತೆ ಅಪಘಾತಗಳಿಂದಾಗಿವೆ. 19 ಸಾವುಗಳು ಹೆದ್ದಾರಿಗಳಲ್ಲಿ ಸಂಭವಿಸಿವೆ. ಶೇ. 24ರಷ್ಟು ಸಾವುಗಳು ವೃದ್ಧಾಪ್ಯ ಮತ್ತು ಕಾಯಿಲೆಯಂತಹ ನೈಸರ್ಗಿಕ ಕಾರಣಗಳಿಂದ ಸಂಭವಿಸಿದ್ದರೆ, ಶೇ. 21ರಷ್ಟು ಸಾವುಗಳು ವನ್ಯಜೀವಿಗಳ ನಡುವಿನ ಸಂಘರ್ಷದಿಂದಾಗಿ ಸಂಭವಿಸಿವೆ.

ಸುಮಾರು ಶೇ. 14ರಷ್ಟು ಸಾವುಗಳು ಬೇಟೆಯಾಡುವುದು ಮತ್ತು ಪ್ರತೀಕಾರದ ಹತ್ಯೆಗಳಿಂದ ಸಂಭವಿಸಿವೆ. 8 ಪ್ರಾಣಿಗಳು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದರೆ, ಎರಡು ಚಿರತೆಗಳು ಬಲೆಗಳಿಂದ ಸಾವನ್ನಪ್ಪಿವೆ. ಶೇ. 9ರಷ್ಟು ಪ್ರಕರಣಗಳಲ್ಲಿ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಫೆಬ್ರವರಿ 2024ರಲ್ಲಿ ಬಿಡುಗಡೆಯಾದ’ಭಾರತದಲ್ಲಿ ಚಿರತೆಗಳ ಸ್ಥಿತಿ 2022′ ವರದಿಯ ಪ್ರಕಾರ, ಮಧ್ಯಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಚಿರತೆ ಜನಸಂಖ್ಯೆಯನ್ನು ಹೊಂದಿದ್ದು, ಮಧ್ಯಪ್ರದೇಶದಲ್ಲಿ 3,907 ಚಿರತೆಗಳಿವೆ. ಮಹಾರಾಷ್ಟ್ರ ಮತ್ತು ಕರ್ನಾಟಕ ನಂತರದ ಸ್ಥಾನದಲ್ಲಿವೆ.

 “ರಸ್ತೆಗಳ ಬಳಿ ನೀರಿನ ಮೂಲಗಳನ್ನು ರಚಿಸದಂತೆ ನಾವು ಸಲಹೆ ನೀಡುತ್ತಿದ್ದೇವೆ. ಏಕೆಂದರೆ ಪ್ರಾಣಿಗಳು ಹೆಚ್ಚಾಗಿ ಅವುಗಳ ಕಡೆಗೆ ಚಲಿಸುತ್ತವೆ ಮತ್ತು ಅಪಘಾತಗಳಿಗೆ ಗುರಿಯಾಗುತ್ತವೆ” ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *