ದೆಹಲಿ: ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಮೇಲ್ಮನವಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸ್ವಾಮೀಜಿ ಈ ರೀತಿಯ ಕೀಳುಮಟ್ಟದ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ನ್ಯಾ.ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಪೀಠ ತರಾಟೆಗೆ ತೆಗದುಕೊಂಡಿದೆ. ಅಲ್ಲದೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕನ್ನೇರಿಶ್ರೀಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಶ್ರೀಗಳಿಗೆ ಸಲಹೆ ಕೊಟ್ಟ ಸುಪ್ರೀಂಕೋರ್ಟ್
ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ನ್ಯಾಯಪೀಠ ಪ್ರಶ್ನಿಸಿದ್ದು, ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ಅವಹೇಳನಕಾರಿ ಭಾಷೆ ಬಳಸಿದ್ದೀರಿ, ಇದು ವಾಕ್ ಸ್ವಾತಂತ್ರ್ಯ ವ್ಯಾಪ್ತಿಯಲ್ಲಿಲ್ಲ. ನೀವು ಮಾತನಾಡುವುದು ನಿಲ್ಲಿಸಿ, ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ ಎಂದು ಮಹಾರಾಷ್ಟ್ರದ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ.
ಪ್ರಕರಣ ಏನಾಗಿತ್ತು?
ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದ ಸಮಾರಂಭದಲ್ಲಿ ಮಾತನಾಡಿದ್ದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೆಲ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಳೆದ ಎರಡು ತಿಗಂಗಳುಗಳಿಂದ ದೇವಾಲಯಕ್ಕೆ ಹೋಗಬೇಡಿ ಎಂದು ಪ್ರಚಾರ ಮಾಡಲಾಗ್ತಿದೆ. ಮುಖ್ಯಮಂತ್ರಿಗಳ ಕೃಪಾಪೋಷಿತ ಲಿಂಗಾಯತ ಮಠಾಧೀಪತಿಗಳ ಒಕ್ಕೂಟದ ಕಲಾವಿದರು ಸೇರಿ ಬಸವ ಸಂಸ್ಕೃತಿ ಅಭಿಯಾನ ಎನ್ನುವ ನಾಟಕವನ್ನ ರಾಜ್ಯಾದ್ಯಂತ ಮಾಡುತ್ತಿದ್ದಾರೆ. ಗುಡಿಯಲ್ಲಿ ದೇವರಲಿಲ್ಲ. ಮನೆಯಲ್ಲಿನ ದೇವರನ್ನು ಹೊಳೆಗೆ ಹಾಕಿ ಎನ್ನುತ್ತಿದ್ದಾರೆ. ಇವರಿಗೆ ನಾನೇ ಬುದ್ಧಿ ಹೇಳಬೇಕು ಎಂದು ಕೆಲ ಅಸಂವಿಧಾನಿಕ ಪದ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ 2 ತಿಂಗಳ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀಗಳು ಹೈಕೋರ್ಟ್ನ ಕಲಬುರಗಿ ವಿಭಾಗೀಯ ಪೀಠದ ಮೊರೆ ಹೋಗಿದ್ದರು. ತೀರಾ ಸಾಮಾನ್ಯ ಜನ ಕೂಡ ಸ್ವಾಮೀಜಿ ಬಳಸಿರುವ ಭಾಷೆ ಬಳಸಲ್ಲ ಎಂದಿದ್ದ ಕೋರ್ಟ್, ಜಿಲ್ಲಾಡಳಿತದ ಆದೇಶವನ್ನ ಎತ್ತಿ ಹಿಡಿದಿತ್ತು.
For More Updates Join our WhatsApp Group :




