ಲಾಕಪ್ ಡೆತ್ ಪ್ರಕರಣದಲ್ಲಿ ನ್ಯಾಯಾಲಯ ನಾಲ್ವರು ಪೊಲೀಸರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಂಗ ಕ್ರಮವು ಮಾನವ ಹಕ್ಕು ಉಲ್ಲಂಘನೆ ವಿರುದ್ಧ ಕಠಿಣ ಸಂದೇಶ ನೀಡಿದೆ.
ಬೆಂಗಳೂರು: ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು ತಲಾ 55,000 ರೂಪಾಯಿ ದಂಡ ವಿಧಿಸಲಾಗಿದೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಂದ್ರ ರಾಥೋಡ್ ಎಂಬುವರನ್ನು 2016ರ ಮಾರ್ಚ್ 19ರಂದು ಬೆಂಗಳೂರಿನ ಜೀವನ್ ಭೀಮಾ ನಗರ ಠಾಣೆಗೆ ಕರೆತರಲಾಗಿತ್ತು. ಆದರೆ ಆತ ಪೊಲೀಸ್ ಠಾಣೆಯಲ್ಲೇ ಸಾವನ್ನಪ್ಪಿದ್ದರು. ಈ ಸಾವಿನ ಕುರಿತಂತೆ ಅಪರಾಧ ತನಿಖಾ ಇಲಾಖೆ ತನಿಖೆಗೆ ಆದೇಶಿಸಿತ್ತು. ತನಿಖೆಯಲ್ಲಿ ಠಾಣೆಯಲ್ಲಿದ್ದ ನಾಲ್ವರು ಪೊಲೀಸ್ ಸಿಬ್ಬಂದಿ ಮಹೇಂದ್ರರನ್ನು ತೀವ್ರವಾಗಿ ಥಳಿಸಿದ್ದು ಈ ಕಾರಣದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿತ್ತು.
ನಂತರ 2019ರ ಜುಲೈ 18ರಂದು ಸಿಐಡಿ ಅಧಿಕಾರಿಗಳು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ನಾಲ್ವರು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ವಿಧಿಸಿದೆ ಎಂದು ಸಿಐಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಡ್ ಕಾನ್‌ಸ್ಟೆಬಲ್ ಎಜಾಜ್ ಖಾನ್, ಕಾನ್‌ಸ್ಟೆಬಲ್‌ಗಳಾದ ಕೇಶವ ಮೂರ್ತಿ, ಮೋಹನ್ ರಾಮ್ ಮತ್ತು ಸಿದ್ದಪ್ಪ ಬೊಮ್ಮನಹಳ್ಳಿ ಅವರಿಗೆ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಏಳು ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ದಂಡ ಮತ್ತು ಐಪಿಸಿ ಕಲಂ 330ರ ಅಡಿಯಲ್ಲಿ ಐದು ವರ್ಷ ಜೈಲು ಮತ್ತು 25 ಸಾವಿರ ದಂಡ ವಿಧಿಸಲಾಗಿದೆ.