Lokayukta ದಾಳಿ || ಪಕ್ಕದ ಮನೆಯತ್ತ ಬ್ಯಾಗ್ ಎಸೆದ ಅಧಿಕಾರಿ : 2.2 ಕೆ.ಜಿ ಚಿನ್ನ ಪತ್ತೆ

ಬೆಂಗಳೂರು: ನಗರದಲ್ಲಿ ಮೂವರು ಸರ್ಕಾರಿ ಅಧಿಕಾರಿಗಳ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಶೋಧ ಮುಂದುವರೆದಿದೆ. ಕೆ.ಜಿಗಟ್ಟಲೆ ಚಿನ್ನಾಭರಣ, ಬೆಳ್ಳಿ ಹಾಗೂ ಲಕ್ಷಾಂತರ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನು ಮಾಪನಶಾಸ್ತ್ರದ ಉಪ ನಿಯಂತ್ರಕ ಅತ್ತರ್ ಅಲಿ, ಕೆಐಎಡಿಬಿ ಭೂಸ್ವಾಧೀನ ಅಧಿಕಾರಿ ಬಿ.ವಿ.ರಾಜಾ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್ ಕುಮಾರ್ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ.

ಪಕ್ಕದ ಮನೆಯತ್ತ ಬ್ಯಾಗ್ ಎಸೆದ ಅಧಿಕಾರಿ: ಈ ಬಗ್ಗೆ ಮಾಹಿತಿ ನೀಡಿರುವ ಲೋಕಾಯುಕ್ತ ಎಸ್​​ಪಿ ಡಾ.ಕೆ.ವಂಶಿಕೃಷ್ಣ, ”ದಾಳಿ ವೇಳೆ ಉಪ ನಿಯಂತ್ರಕ ಅತ್ತರ್ ಅಲಿ ಎಂಬುವರ ಮನೆಯಲ್ಲಿ ಒಟ್ಟು 2.2 ಕೆ.ಜಿ ಚಿನ್ನ, 4 ಕೆ.ಜಿ ಬೆಳ್ಳಿ ವಸ್ತುಗಳು, ದುಬಾರಿ ಬೆಲೆಯ ವಾಚುಗಳು, ಡೈಮಂಡ್ ನೆಕ್ಲೆಸ್ ಹಾಗೂ 25 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಅತ್ತರ್ ಅಲಿ, ಚಿನ್ನಾಭರಣ ಹಾಗೂ ಹಣವಿದ್ದ ಬ್ಯಾಗನ್ನು ಪಕ್ಕದ ಮನೆಯತ್ತ ಎಸೆದಿರುವ ಪ್ರಸಂಗವೂ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳ ಕಣ್ತಪ್ಪಿಸಿದ್ದ ಅತ್ತರ್ ಅಲಿ, ಪಕ್ಕದ ಮನೆಯತ್ತ ಬ್ಯಾಗ್ ಎಸೆದಿದ್ದರು. ಶಬ್ಧ ಕೇಳಿ ಎಚ್ಚೆತ್ತ ಅಧಿಕಾರಿಗಳು, ಬ್ಯಾಗ್​​ ವಶಕ್ಕೆ ಪಡೆದಿದ್ದು, ಅದರಲ್ಲಿ ಚಿನ್ನಾಭರಣ, ನಗದು ಪತ್ತೆಯಾಗಿದೆ” ಎಂದು ತಿಳಿಸಿದ್ದಾರೆ.

”ಮತ್ತೊಂದೆಡೆ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ರಮೇಶ್ ಕುಮಾರ್ ಹಾಗೂ ಕೆಐಎಡಿಬಿ ಭೂಸ್ವಾಧೀನ ಅಧಿಕಾರಿ ಬಿ.ವಿ.ರಾಜಾ ಮನೆಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಶೋಧ ಕಾರ್ಯ ನಡೆಯುತ್ತಿದೆ” ಎಂದು ಲೋಕಾಯುಕ್ತ ಎಸ್​ಪಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *