ಕಾರವಾರ: ಸೇತುವೆ ಕುಸಿದು ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಎರಡು ದಿನಗಳ ಕಾರ್ಯಾಚರಣೆ ಬಳಿಕ ಕೊನೆಗೂ ಗುರುವಾರ ಸಂಜೆ ಕ್ರೇನ್ ಮೂಲಕ ಎಳೆದು ನದಿ ದಡಕ್ಕೆ ತರಲಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ, ಕಾರ್ಮಿಕ ಸಣ್ಯಾ ಸಿದ್ದಿ ಎಂಬವರು ನೀರಿನಾಳದಲ್ಲಿ ಸಾಹಸಮಯ ಪ್ರದರ್ಶನ ತೋರಿ, ಯಶಸ್ವಿಯಾಗಿ ಲಾರಿ ಎಳೆದು ಮೇಲಕ್ಕೆ ತಂದಿದ್ದಾರೆ. ಐಆರ್‌ಬಿ ಕಂಪೆನಿ ಜೊತೆಗೆ ಎನ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮುಂಜಾನೆಯಿಂದಲೇ ಆರಂಭಗೊಂಡಿದ್ದ ಕಾರ್ಯಾಚರಣೆಯಲ್ಲಿ ಈಶ್ವರ್ ಮಲ್ಪೆ ತಂಡ ಹಾಗೂ ಇಮ್ರಾನ್ ಕ್ರೇನ್ ಸರ್ವಿರ್ಸ್ನ ಕಾರ್ಮಿಕರು ನದಿಯ ಆಳದಲ್ಲಿ ಸೇತುವೆ ಸ್ಲಾಬ್ ಮೇಲಿದ್ದ ಲಾರಿಗೆ ರೋಪ್ ಬಿಗಿಯಲು ಹಲವು ಗಂಟೆ ಬೇಕಾಯಿತು. ಬಳಿಕ ಎರಡು ಕ್ರೇನ್ಗಳ ರೋಪ್ ಮೂಲಕ ಲಾರಿ ಎಳೆಯಲು ಪ್ರಯತ್ನಿಸಲಾಯಿದರೂ, ಸ್ಲಾಬ್ನಿಂದ ತಪ್ಪಿ ನೀರಿನ ಆಳಕ್ಕೆ ಬಿದ್ದಿತು. ಬಳಿಕ ಮತ್ತೊಂದು ರೋಪ್ ಕಟ್ಟಿಕ್ಕೊಂಡು ಕ್ರೇನ್ ಮೂಲಕ ಎಳೆಯುವಾಗ ಲಾರಿ ನದಿಯ ಅರ್ಧಕ್ಕೆ ಬಂದ ವೇಳೆ ಬಂಡೆಗೆ ಸಿಲುಕಿ ಸಣ್ಣ ರೋಪ್ ಕಟ್ ಆಗಿ ಮತ್ತೆ ಅಡಚಣೆಯಾಗಿತ್ತು
ಮತ್ತೊಮ್ಮೆ ಲಾರಿಯ ಹಿಂಭಾಗದಲ್ಲಿ ರೋಪ್ ಕಟ್ಟಿಕೊಂಡು ಕಾರ್ಯಾಚರಣೆ ನಡೆಸಿದ ತಂಡ ಬಂಡೆಯನ್ನು ತಪ್ಪಿಸಿ, ಯಶಸ್ವಿಯಾಗಿ ದಡದತ್ತ ಎಳೆಯುವಲ್ಲಿ ಸಫಲವಾಗಿದೆ. ಮೂರು ರೋಪ್ ಎರಡು ಕ್ರೇನ್, ಮೂರು ಟೋಯಿಂಗ್ ವಾಹನ ಮತ್ತು ಎರಡು ಬೋಟ್ ಮೂಲಕ 50ಕ್ಕೂ ಹೆಚ್ಚು ಕಾರ್ಮಿಕರು 9 ಗಂಟೆಗಳಿಂದ ಕಾರ್ಯಾಚರಣೆ ನಡೆಸಿದರು. ಈ ಮೂಲಕ ಕಳೆದ 8 ದಿನಗಳಿಂದ ನದಿಯಲ್ಲಿದ್ದ ತಮಿಳುನಾಡು ಮೂಲದ ಸೆಂಥಿಲ್‌ಕುಮಾರ್ ಮಾಲಿಕತ್ವದ ಲಾರಿಯನ್ನು ಮೇಲೆತ್ತಲಾಗಿದೆ.
ನೀರಿನಾಳದಲ್ಲಿ ಸಣ್ಯಾ ಸಿದ್ದಿ ಸೆಣಸಾಟ: ಲಾರಿ ಮೇಲೆತ್ತುವ ಕಾರ್ಯಾಚರಣೆಯಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಜೊತೆಗೆ ಕಾರ್ಮಿಕ ಸಣ್ಯಾ ಸಿದ್ದಿ ಯಾವುದೇ ಜೀವರಕ್ಷಕ ಸಾಧನಗಳಿಲ್ಲದೆ ನೀರಿನಲ್ಲಿ ಮುಳುಗಿ ರೋಪ್ ಬಿಗಿದು, ಲಾರಿಗೆ ಸಿಲುಕಿದ್ದ ಸರಳುಗಳನ್ನು ಕಟ್ ಮಾಡಿದ್ದರು. ತಲೆಗೆ ಗಾಯವಾಗಿತ್ತಾದರೂ ನೋವು ತಡೆದುಕೊಂಡು ನಿರಂತರವಾಗಿ ಲಾರಿ ಆಪರೇಷನ್ನಲ್ಲಿ ತೊಡಗಿಕೊಂಡಿದ್ದ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಯಲ್ಲಾಪುರದ ಇಮ್ರಾನ್ ಕ್ರೇನ್ ಸರ್ವಿಸ್ನ ಕಾರ್ಮಿಕನಾಗಿ ಆಗಮಿಸಿದ್ದ ಸಣ್ಯಾ ಸಿದ್ದಿ ಬುಧವಾರ ನದಿಯಲ್ಲಿ ಮೊದಲ ಬಾರಿಗೆ ಯಾವುದೇ ಆಕ್ಸಿಜನ್ ಸಲಕರಣೆ ಇಲ್ಲದೆ ಮುಳುಗಿ ರೋಪ್ ಬಿಗಿದಿದ್ದರು. ಗುರುವಾರ ಕೂಡ 3ರಿಂದ 4 ನಿಮಿಷಗಟ್ಟಲೆ ನೀರಿನಲ್ಲೇ ಮುಳುಗಿ ಎರಡು ರೋಪ್ ಬಿಗಿದಿದ್ದರು. ಅಲ್ಲದೆ, ಲಾರಿಗೆ ಸುತ್ತಿದ್ದ ಸೇತುವೆ ಸರಳು, ವೈರ್‌ಗಳನ್ನು ಕತ್ತರಿಸಿ ಲಾರಿ ಎಳೆಯಲು ಸುಲಭ ಮಾಡಿಕೊಟ್ಟರು.