ಧಾರವಾಡ: ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿಮಾಡಬೇಕೆಂದು ಆಗ್ರಹಿಸಿ ಧಾರವಾಡದಲ್ಲಿ ಜನಸಾಮಾನ್ಯರ ವೇದಿಕೆ ಇಂದು ಹೋರಾಟಕ್ಕೆ ಮುಂದಾಗಿದೆ. ವಿದ್ಯಾರ್ಥಿ ಸಂಘಟನೆಗಳು ಕೂಡಾ ಪ್ರತಿಭಟನೆಗೆ ಕೈಜೋಡಿಸಿದ್ದು, ಈ ಪ್ರತಿಭಟನೆಗೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ರಾಜ್ಯದಲ್ಲಿ ಖಾಲಿಯಿರುವ 2.84 ಲಕ್ಷ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಮತ್ತು ಕೇಂದ್ರ ಸರ್ಕಾರವೂ ಸಹ ಖಾಲಿ ಹುದ್ದೆಗಳನ್ನು ಭರಿಸಬೇಕು ಎಂಬ ಮುಖ್ಯ ಉದ್ದೇಶವನ್ನಿಟ್ಟುಕೊಂಡು ಈ ಹೋರಾಟ ನಡೆಸಲಾಗುತ್ತಿದೆ. ಸೆಪ್ಟೆಂಬರ್ 25 ರಂದು ಬರೋಬ್ಬರಿ 5000 ವಿದ್ಯಾರ್ಥಿಗಳು ಹುದ್ದೆ ನೇಮಕಾತಿಗಾಗಿ ನಡೆಸಿದ್ದ ಬೃಹತ್ ಹೋರಾಟದಲ್ಲಿ ಸಂಭವಿಸಿದ್ದ ಅಹಿತಕರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅನುಮತಿ ನಿರಾಕರಿಸಲಾಗಿದೆ. ಆದರೆ ಅನುಮತಿ ನೀಡದಿದ್ದರೂ ಹೋರಾಟ ನಿಲ್ಲೋದಿಲ್ಲ ಎಂದು ಸಂಘಟನೆ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ನಗರದ ಶ್ರೀನಗರ ವೃತ್ತದಿಂದ 200 ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ಪ್ರತಿಭಟನೆ ಆರಂಭಿಸಿದ್ದು, ವೃತ್ತದ ಸುತ್ತಮುತ್ತ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆಗಾಗಿ ಒಬ್ಬ ಪೊಲೀಸ್ ಕಮಿಷನರ್, ಇಬ್ಬರು ಡಿಸಿಪಿ, ಇಬ್ಬರು ಎಸಿಪಿ, 13 ಇನ್ಸ್ಪೆಕ್ಟರ್‌ಗಳು, 16 ಪಿಎಸ್‌ಐಗಳು ಸೇರಿದಂತೆ ದಂಡ ಪಡೆ ಅಳವಡಿಸಲಾಗಿದೆ. ಪ್ರತಿಭಟನಾಕಾರರು ಹೋರಾಟ ಮಾಡುವ ಪಟ್ಟು ಹಿಡಿದ ಕಾರಣ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಎರಡು ಸರ್ಕಾರಿ ಬಸ್‌ಗಳನ್ನು ಕರೆಸಿ, ಸುಮಾರು 50ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿದ್ದಾರೆ.
For More Updates Join our WhatsApp Group :
