ಮಂಗಳೂರು: ಕಂಬಳ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ ‘ಲಕ್ಕಿ’ ಎಂಬ ಕೋಣ ಬುಧವಾರ ಕೊನೆಯುಸಿರೆಳೆದಿದೆ. ಕಂಬಳ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದು, ಹಲವರು ಆಗಮಿಸಿ ಕಳೇಬರದ ಅಂತಿಮ ದರ್ಶನ ಪಡೆದರು.
ವರಪಾಡಿ ಬಡಗುಮನೆ ದಿವಾಕರ ಚೌಟರ ಹಟ್ಟಿಯಲ್ಲಿದ್ದ ಆರು ವರ್ಷ ಪ್ರಾಯದ ಲಕ್ಕಿ ಕಳೆದ ಕೆಲವು ದಿನಗಳಿಂದ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು.
ಲಕ್ಕಿ ಜೂನಿಯರ್ ವಿಭಾಗದಲ್ಲಿ ಮೊದಲು ತನ್ನನ್ನು ಪರಿಚಯಿಸಿಕೊಂಡು ಸೀನಿಯರ್ ಆದೊಡನೆ ತನ್ನ ಸಾಧನೆ ಆರಂಭಿಸಿತ್ತು. 2023-24ರ ಸೀಸನ್ನಲ್ಲಿ ದೊಡ್ಡ ಹೆಸರು ಮಾಡಿ ಪದಕ ಮಾಲೆಗೆ ಕೊರಳೊಡ್ಡಿದ್ದ ಈ ಕೋಣ, ಭವಿಷ್ಯದ ದೊಡ್ಡ ಸ್ಟಾರ್ ಆಗುವ ಸೂಚನೆ ನೀಡಿತ್ತು. ಆದರೆ ಕಂಬಳ ಕರೆಯಲ್ಲಿ ಚಿಗರೆಯಂತೆ ಓಡುತ್ತಿದ್ದ ಲಕ್ಕಿ ಬದುಕಿನ ಓಟವನ್ನು ಬೇಗನೆ ಮುಗಿಸಿದೆ.
ಕಳೆದ ಕಂಬಳ ಸೀಸನ್ನಲ್ಲಿ 5 ಮೆಡಲ್ಗಳನ್ನು ಲಕ್ಕಿ ಗೆದ್ದುಕೊಂಡಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ 2ನೇ ಬಹುಮಾನ ಮತ್ತು ಕಕ್ಯಪದವು, ನರಿಂಗಾನ, ಐಕಳ ಮತ್ತು ಜಪ್ಪು ಕಂಬಳಗಳಲ್ಲಿ ಮೆಡಲ್ ಪಡೆದಿತ್ತು.