ಮೈಸೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್ ಆಗಿದ್ದು, ಉಗ್ರ ಮತ್ತು ಅತ್ಯಾಚಾರಿಗಳೂ ಮೊಬೈಲ್ ಬಳಸುತ್ತಿದ್ದ ಕ್ಲಿಪ್ಗಳು ಹೊರ ಬಂದಿದ್ದವು. ಆ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಸರ್ಕಾರ ಘಟನೆ ಸಂಬಂಧ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ಎತ್ತಂಗಡಿ ಮಾಡಿ, ಅಧೀಕ್ಷಕ ಮ್ಯಾಗೇರಿ ಮತ್ತು ಉಪಾಧೀಕ್ಷಕರಾದ ಅಶೋಕ್ ಭಜಂತ್ರಿ ಅವರನ್ನು ಸಸ್ಪೆಂಡ್ ಮಾಡಿತ್ತು. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿಯೂ ಕೈದಿಗಳಿಗೆ ಸಕಲ ಸೌಕರ್ಯ ಸಿಗುತ್ತಿರುವ ಬಗ್ಗೆ ವರದಿಯಾಗಿದೆ.
ಮೈಸೂರು ಕೇಂದ್ರ ಕಾರಾಗ್ರಹದಲ್ಲಿ ಕೆಲ ಕೈದಿಗಳಿಗೆ ಬೇಕಾದ ಸೌಲಭ್ಯ ಒದಗಿಸಲಾಗುತ್ತಿದ್ದು, ಮದ್ಯ, ಮಾಂಸಾಹಾರ, ಸಿಗರೇಟುಗಳು ಮತ್ತು ಬೀಡಿ, ಮೊಬೈಲ್ ಫೋನ್ಗಳು ನಿರ್ದಿಷ್ಟ ಬೆಲೆಗೆ ಲಭ್ಯವಾಗುತ್ತಿವೆ. ಆ ಮೂಲಕ ಕೈದಿಗಳ ಮನಃಪರಿವರ್ತನಾ ಕೇಂದ್ರಗಳಾಗಬೇಕಿದ್ದ ಜೈಲು, ಮೋಜಿನ ಸ್ಥಳವಾಗಿ ಮಾರ್ಪಟ್ಟಿದೆ. ಕಾರಾಗೃಹದ ಒಳಭಾಗದಲ್ಲಿ ಪ್ರತಿ ವಸ್ತುವಿಗೂ ನಿಗದಿತ ಬೆಲೆ ಇದ್ದು, ಮಾರುಕಟ್ಟೆಯಲ್ಲಿ ದರ ಬದಲಾದರೂ ಇಲ್ಲಿ ಯಾವುದೇ ಏರಿಳಿತ ಆಗಲ್ಲ. ಒಂದು ವಸ್ತುವಿನ ಕನಿಷ್ಟ ಬೆಲೆಯೇ 150 ರೂ. ಇದೆ. ಇಷ್ಟು ಹಣ ಕೊಟ್ಟು ಖರೀದಿಸುವ ಸಾಮರ್ಥ್ಯ ಇರುವವರಿಗಾಗಿ ಪ್ರತಿ ವಾರ ಮದ್ಯ ಮತ್ತು ಮಾಂಸವನ್ನು ಆರ್ಡರ್ ಮಾಡಲಾಗುತ್ತೆ ಎಂಬ ಬಗ್ಗೆ ಜೈಲ್ ವಿಸಿಟಿಂಗ್ ಬೋರ್ಡಿನ ಸದಸ್ಯ ಪವನ ಸಿದ್ದರಾಮು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕೈದಿಗಳಿಗೆ ಐಷಾರಾಮಿ ಜೀವನಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಕ್ಯಾಂಟೀನ್ ಆಪರೇಟರ್ಗಳು ಮತ್ತು ಕೆಲ ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಸಿಬ್ಬಂದಿ ಪಾತ್ರ ವಹಿಸಿದ್ದಾರೆ. ಇವು ಜೈಲು ಅಧೀಕ್ಷಕರ ಮೂಗಿನ ಕೆಳಗೆಯೇ ನಡೆಯುತ್ತಿರುವ ಘಟನೆಗಳಾಗಿವೆ. ಮೈಸೂರು ಪೊಲೀಸರು ಸರ್ಪ್ರೈಸ್ ವಿಸಿಟ್ಗಳನ್ನು ನಡೆಸಿದರೂ ಅಲ್ಲಿ ಏನು ಸಿಗದಿರುವುದು ವಿಪರ್ಯಾಸ.
For More Updates Join our WhatsApp Group :
