ಮಂಡ್ಯ : ಬಾಲಕರ ಪ್ರೀತಿ ಪ್ರೇಮದ ಕಿರುಕುಳದಿಂದ ಬೇಸತ್ತ 9ನೇ ತರಗತಿ ಓದುತ್ತಿದ್ದ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಕಾನೂನು ಸಂಘರ್ಷಕ್ಕೊಳಗಾದ ನಾಲ್ವರು ಬಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಾನೂನು ಸಂಘರ್ಷಕ್ಕೊಳಗಾದ ನಾಲ್ವರು ಬಾಲಕರು, ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದರೆನ್ನಲಾಗಿದ್ದು, ಈ ವಿಚಾರವಾಗಿ ಯುವಕರ ನಡುವೆಯೇ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಮಾತಿನ ಚಕಮಕಿಯ ಆಡಿಯೋ ವೈರಲ್ ಆಗಿದೆಯಲ್ಲದೆ, ಬಾಲಕಿ ತಾಯಿಯ ವಾಟ್ಸಪ್‌ಗೂ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.
ಇದರಿಂದ ಬೇಸತ್ತ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಬಾಲಕರು ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕೆ ಕ್ರಮವಹಿಸಿದ್ದಾರೆ.