ದೆಹಲಿಯ CRPF​ ಶಾಲೆಯ ಬಳಿ ಭಾರಿ ಸ್ಫೋಟ : ಜೀವಹಾನಿ ಇಲ್ಲ

ಸ್ಫೋಟದ ಸ್ಥಳದಲ್ಲಿ ಪೊಲೀಸರಿಂದ ತನಿಖೆ

ಸ್ಫೋಟದ ಸ್ಥಳದಲ್ಲಿ ಪೊಲೀಸರಿಂದ ತನಿಖೆ

ನವದೆಹಲಿ: ದೆಹಲಿಯ ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದ ಸಿಆರ್​ಪಿಎಫ್ ಶಾಲೆಯ ಬಳಿ ಭಾನುವಾರ ಬೆಳಗ್ಗೆ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 7.50ರ ಸುಮಾರಿಗೆ ಸಂಭವಿಸಿದ ಸ್ಫೋಟದ ಕಾರಣವನ್ನು ಕಂಡುಹಿಡಿಯಲು ಸೆಕ್ಟರ್ 14ರಲ್ಲಿರುವ ಸಿಆರ್​ಪಿಎಫ್ ಶಾಲೆಯ ಬಳಿಗೆ ಬಾಂಬ್ ಸ್ಕ್ವಾಡ್ ಮತ್ತು ಪೊಲೀಸ್ ವಿಧಿವಿಜ್ಞಾನ ತಂಡಗಳು ಆಗಮಿಸಿವೆ. ಅಪರಾಧ ವಿಭಾಗ ಮತ್ತು ವಿಶೇಷ ಸೆಲ್ ಮತ್ತು ಅಗ್ನಿಶಾಮಕ ದಳ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಶಾಲೆಯ ಗೋಡೆ, ಹತ್ತಿರದ ಅಂಗಡಿಗಳು ಮತ್ತು ಕಾರಿಗೆ ಹಾನಿಯಾಗಿದೆ ಮತ್ತು ಇಡೀ ಪ್ರದೇಶದ ಸುತ್ತ ಯಾರೂ ಬರದಂತೆ ನಿರ್ಬಂಧ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ಹೊಗೆ ಬರುತ್ತಿರುವುದು ಕಾಣಿಸಿದೆ. ಸ್ಫೋಟದ ನಂತರ ದಟ್ಟವಾದ ಬಿಳಿ ಹೊಗೆ ಕಾಣಿಸಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಮಾತನಾಡಿದ ದೆಹಲಿ ಅಗ್ನಿಶಾಮಕ ಸೇವೆ ಅಧಿಕಾರಿಯೊಬ್ಬರು, “ಸಿಆರ್​ಪಿಎಫ್ ಶಾಲೆಯ ಆವರಣ ಗೋಡೆಯ ಬಳಿ ಸ್ಫೋಟ ಸಂಭವಿಸಿದ ಬಗ್ಗೆ ನಮಗೆ ಕರೆ ಬಂದಿತ್ತು. ನಾವು ತಕ್ಷಣ ಎರಡು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಿದ್ದೇವೆ. ಸ್ಫೋಟದಿಂದಾಗಿ ಎಲ್ಲಿಯೂ ಬೆಂಕಿ ಹೊತ್ತಿಕೊಂಡಿಲ್ಲ ಮತ್ತು ಯಾರೂ ಗಾಯಗೊಂಡಿಲ್ಲ. ಹೀಗಾಗಿ ನಮ್ಮ ವಾಹನಗಳು ಸ್ಥಳದಿಂದ ಹಿಂತಿರುಗಿವೆ” ಎಂದು ತಿಳಿಸಿದರು.

ದೊಡ್ಡ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ ಎಂದು ಬೆಳಿಗ್ಗೆ 7.47ಕ್ಕೆ ಪಿಸಿಆರ್ ಕರೆ ಬಂದಿತ್ತು. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *