ನವದೆಹಲಿ: ಹಿರಿಯ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್ ಗೆ ಒಳಗಾದ ಪರಿಣಾಮ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದು ನಾಲ್ಕು ಬಾರಿ ಡಯಾಲಿಸಿಸ್ ಮೊರೆ ಹೋಗಬೇಕಾದ ಘಟನೆ ಡುಂಗರಪುರ ವೈದ್ಯಕೀಯ ಕಾಲೇಜಿನಲ್ಲಿ ವರದಿಯಾಗಿದೆ.
ರ್ಯಾಗಿಂಗ್ ಗೆ ಒಳಗಾಗಿದ್ದ ವಿದ್ಯಾರ್ಥಿಯ ಕಿಡ್ನಿಗೆ ಸೋಂಕು ತಗುಲಿತ್ತು. ಡುಂಗರಪುರ ಪೊಲೀಸ್ ಠಾಣೆಯ ಎಸ್ ಹೆಚ್ಒ ಗಿರ್ಧಾರಿ ಸಿಂಗ್ ಮಾಹಿತಿಯ ಪ್ರಕಾರ, ಮೇ 15 ರಂದು ದ್ವಿತೀಯ ವರ್ಷದ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 300 ಸಿಟ್ ಅಪ್ಸ್ ಮಾಡುವಂತೆ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಿದ್ದಾರೆ. ಪರಿಣಾಮ ಆತನ ಮೂತ್ರಪಿಂಡಗಳ ಮೇಲೆ ತೀವ್ರವಾದ ಒತ್ತಡ ಉಂಟಾಗಿದ್ದು, ಸೋಂಕು ತಗುಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತನನ್ನು ಅಹಮದಾಬಾದ್‌ನಲ್ಲಿ ಒಂದು ವಾರದವರೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಮಯದಲ್ಲಿ ನಾಲ್ಕು ಬಾರಿ ಡಯಾಲಿಸಿಸ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ, ವಿದ್ಯಾರ್ಥಿಯು ಈಗ ಸ್ಥಿರವಾಗಿದ್ದಾನೆ.
ವಿದ್ಯಾರ್ಥಿ ಮರಳಿ ಕಾಲೇಜಿಗೆ ಬರಲು ಆರಂಭಿಸಿದ್ದಾನೆ. ಸಂಸ್ಥೆಯ ರ್ಯಾಗಿಂಗ್ ವಿರೋಧಿ ಸಮಿತಿಯ ವಿಚಾರಣೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಕಾಲೇಜು ಪ್ರಾಂಶುಪಾಲರು 7 ಆರೋಪಿಗಳ ವಿರುದ್ಧ ದೂರು ನೀಡಿದ್ದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ.