ಮೇಕೆದಾಟು ಸರ್ವೇ ಕಾರ್ಯ ಸ್ಥಗಿತ : ಅಧಿಕಾರಿಗಳ ವರ್ಗ

ರಾಮನಗರ: ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನಾ ಪ್ರದೇಶದ ಗಡಿ ಗುರುತಿಸುವಿಕೆ ಮತ್ತು ಮರಗಳ ಸರ್ವೆ ಕಾರ್ಯ ಸ್ಥಗಿತಗೊಂಡಿದೆ. ಈ ಕಾರ್ಯಕ್ಕಾಗಿ ವಿಶೇಷವಾಗಿ ನಿಯೋಜನೆಗೊಂಡಿದ್ದ ಕೆಲ ಉಪ ವಲಯ ಅರಣ್ಯಾಧಿಕಾರಿ ಕಂ.ಮೋಜಣಿದಾರರನ್ನು ಅರಣ್ಯ ಇಲಾಖೆ ವರ್ಗಾವಣೆ ಮಾಡಿದೆ.

ಜಲಾಶಯ ಯೋಜನಾ ಪ್ರದೇಶದಲ್ಲಿ ನೀರು ನಿಲ್ಲುವ ಗಡಿ ಗುರುತಿಸುವಿಕೆ ಜತೆಗೆ ಅಲ್ಲಿರುವ ಮರಗಳ ಸರ್ವೆಗಾಗಿ ರಾಜ್ಯದ ವಿವಿಧ ಭಾಗಗಳ 29 ಉಪ ಅರಣ್ಯ ಅರಣ್ಯಾಧಿಕಾರಿ ಕಂ. ಮೋಜಣಿದಾರರನ್ನು ವಿಶೇಷ ಕರ್ತವ್ಯದ ಮೇರೆಗೆ ಇಲಾಖೆ ಕಳೆದ ಜುಲೈನಲ್ಲಿ ನಿಯೋಜಿಸಿ ಆದೇಶ ಹೊರಡಿಸಿತ್ತು.

ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಹಸಿರು ನಿಶಾನೆ ಸಿಗುವುದು ಒಂದೆಡೆ ವಿಳಂಬವಾಗುತ್ತಿದೆ. ಮತ್ತೊಂದೆಡೆ ಸರ್ವೆ ಕೆಲಸ ಪೂರ್ಣಕ್ಕೆ ಮುಂಚೆಯೇ ತಂಡದಲ್ಲಿದ್ದವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತಿದೆ.

8 ಮಂದಿ ವರ್ಗಾವಣೆ: ‘ಸರ್ವೆಗೆ ನಿಯೋಜನೆಯಾಗಿರುವವರು ಚಾಮರಾಜನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ಮಾಡಿಕೊಂಡು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು. 29 ಮಂದಿ ಪೈಕಿ ಅನಿವಾರ್ಯ ಕಾರಣಗಳಿಂದಾಗಿ ಇಬ್ಬರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಉಳಿದ 27 ಮಂದಿ ಸರ್ವೇ ಕಾರ್ಯದಲ್ಲಿ ತೊಡಗಿದ್ದರು. ಅದರಲ್ಲೀಗ 8 ಮಂದಿ ವರ್ಗಾವಣೆಯಾಗಿದ್ದಾರೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಯೋಜನಾ ಪ್ರದೇಶದ ಸರ್ವೆ ಕಾರ್ಯ ವರ್ಷದಿಂದ ನಡೆಯುತ್ತಿದೆ. ಇದರ ನಡುವೆಯೇ ಕೆಲವರನ್ನು ವರ್ಗಾವಣೆ ಮಾಡಿರುವುದರಿಂದ ಸರ್ವೆ ಕಾರ್ಯ ವಿಳಂಬವಾಗಲಿದೆ. ಸರ್ವೇ ಪೂರ್ಣಗೊಂಡು ಅದರ ವರದಿ ಕೈ ಸೇರಿದರೆ, ಮುಂದೆ ಯೋಜನೆಗೆ ಅನುಮತಿ ಸಿಕ್ಕ ಕೂಡಲೇ ಕಾಮಗಾರಿ ಶುರು ಮಾಡಲು ಅನುಕೂಲವಾಗಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಮೇಕೆದಾಟು ಸಮತೋಲನ ಜಲಾಶಯವು 67 ಟಿಎಂಸಿ ಅಡಿ ಕಾವೇರಿ ನೀರು ಸಂಗ್ರಹದೊಂದಿಗೆ, ಬೆಂಗಳೂರಿಗೆ ಕುಡಿಯುವುದಕ್ಕಾಗಿ 24 ಟಿಎಂಸಿ ಅಡಿ ನೀರು ಪೂರೈಕೆ ಹಾಗೂ 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿಯೊಂದಿಗೆ ಮೇಕೆದಾಟು ಯೋಜನೆ ರೂಪಿಸಲಾಗಿದೆ. ಸದ್ಯ ₹9 ಸಾವಿರ ಕೋಟಿ ಮೊತ್ತದ ಈ ಯೋಜನೆಗಾಗಿ 4,716 ಹೆಕ್ಟೇರ್ ಅರಣ್ಯ ಹಾಗೂ 280 ಹೆಕ್ಟೇರ್ ಕಂದಾಯ ಭೂಮಿ ಮುಳುಗಡೆಯಾಗಲಿದೆ.

‘ಸರ್ವೆ ಶುರುವಾದಾಗ ಮತ್ತೆ ಕರೆಸುತ್ತೇವೆ’

‘ಮೇಕೆದಾಟು ಯೋಜನಾ ಪ್ರದೇಶದ ಸರ್ವೆ ಕಾರ್ಯ ಇನ್ನೂ ಮುಗಿದಿಲ್ಲ. ಕೆಲ ಕಾರಣಗಳಿಂದಾಗಿ ಸರ್ವೇ ನಿಲ್ಲಿಸಲಾಗಿದೆ. ಇದರ ನಡುವೆಯೇ ಇಲಾಖೆಯಲ್ಲಿ ಮಾರ್ಗಸೂಚಿಗಳ ಪ್ರಕಾರ ಐದು ವರ್ಷಕ್ಕೊಮ್ಮೆ ವರ್ಗಾವಣೆ ನಡೆದಿದೆ. ಹಾಗಾಗಿ ತಂಡದಲ್ಲಿದ್ದ ಕೆಲವರು ವರ್ಗಾವಣೆಗೊಂಡಿದ್ದಾರೆ. ಮತ್ತೆ ಸರ್ವೇ ಶುರುವಾದಾಗ ಅವರನ್ನು ಕರೆಸಿಕೊಳ್ಳಲಾಗುವುದು’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್  ತಿಳಿಸಿದರು.

Leave a Reply

Your email address will not be published. Required fields are marked *