ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ಗೆ ಸಚಿವ ಲಾಡ್ ಅನಿರೀಕ್ಷಿತ ಭೇಟಿ

ಧಾರವಾಡ: ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನಗರದ ಸೈದಾಪುರದ ಸಮಾಜ ಕಲ್ಯಾಣ ಇಲಾಖೆ ಮೆಟ್ರಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ, ವಿದ್ಯಾರ್ಥಿನಿಯರ ಜೊತೆಗೆ ಕುಳಿತು ಊಟ ಮಾಡಿದರು. ಗ್ರಂಥಾಲಯ, ಓದುವ ಕೊಠಡಿ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಕುರಿತು ಪರಿಶೀಲಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಅವರೊಂದಿಗೆ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಸಚಿವರು, ನೇರವಾಗಿ ಅಡುಗೆ ಕೋಣೆಗೆ ಭೇಟಿ ನೀಡಿ, ಆಹಾರ ತಯಾರಿಕೆ, ಅಡುಗೆ ಪದಾರ್ಥ, ಸ್ವಚ್ಛತೆ, ನೈರ್ಮಲ್ಯ ಪರಿಶೀಲಿಸಿ, ಅಡುಗೆ ಪದಾರ್ಥಗಳ ಗುಣಮಟ್ಟ, ರುಚಿ ನೋಡಿದರು. ನಂತರ ಊಟದ ಸಭಾಂಗಣದಲ್ಲಿ ವಸತಿನಿಲಯದ ವಿದ್ಯಾರ್ಥಿನಿಯರೊಂದಿಗೆ ಸಂವಾದ ಮಾಡಿ, ಅವರ ಓದು, ಹಾಸ್ಟೆಲ್ ಸೌಲಭ್ಯ, ಇಲಾಖೆ ಅಧಿಕಾರಿಗಳು ತೋರುವ ಕಾಳಜಿ, ಆರೋಗ್ಯ ಸುರಕ್ಷತೆ ಬಗ್ಗೆ ಮಾಹಿತಿ ಪಡೆದರು.

ಸಚಿವ ಸಂತೋಷ್ ಲಾಡ್ ಮಾತನಾಡಿ, ಬೇಡಿಕೆ ಅನುಸಾರ ವಸತಿನಿಲಯದ ಆಸಕ್ತ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಐಎಎಸ್, ಕೆಎಎಸ್​ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು. ನಿಲಯ ಪಾಲಕರಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಿದರು.

ವಸತಿನಿಲಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ. ಯಾವುದೇ ಕೊರತೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಜ್ಞಾನ ಬೆಳೆಸಲು ಹೆಚ್ಚು ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿನಿಯರು ಇಚ್ಚಿಸಿದಲ್ಲಿ ವಿಶೇಷವಾದ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡುವುದಾಗಿ ಸಚಿವರು ತಿಳಿಸಿದರು.

ಜಿಲ್ಲೆಯ ಹಿರಿಯ ಅಧಿಕಾರಿಗಳು ವಿವಿಧ ಇಲಾಖೆಗಳ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ, ಸಾಧನೆಯ ಛಲ ಮತ್ತು ಆತ್ಮಗೌರದ ಬದುಕಿನ ಬಗ್ಗೆ ಪ್ರೇರಣೆ ನೀಡಬೇಕು. ಇಲಾಖೆ ಮುಖ್ಯಸ್ಥರು ವಸತಿ ನಿಲಯಗಳಿಗೆ ನಿರಂತರ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಮಾನಸಿಕ ಧೈರ್ಯ ಮತ್ತು ಆತ್ಮೀಯ ಸ್ಪಂದನೆ ಬೆಳೆಸಬೇಕೆಂದು ತಿಳಿಸಿದರು

ವಿದ್ಯಾರ್ಥಿನಿಯರೊಂದಿಗೆ ಸಚಿವ ಸಂತೋಷ್ ಲಾಡ್, ಡಿಸಿ ದಿವ್ಯ ಪ್ರಭು ಮತ್ತು ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು, ಚಪಾತಿ, ಸವತಿಕಾಯಿ ಪಲ್ಲೆ, ಅನ್ನ ಸಾಂಬರ್​ ಸವಿದರು. ಊಟದ ನಂತರ ವಿದ್ಯಾರ್ಥಿಗಳಿಗೆ ಬಾಳೆಹಣ್ಷು ನೀಡಲಾಯಿತು. ವಿದ್ಯಾರ್ಥಿನಿಯರ ವಸತಿ ನಿಲಯದ ಅಚ್ಚುಕಟ್ಟು, ಸ್ವಚ್ಛತೆ, ವಿದ್ಯಾರ್ಥಿನಿಯರ ಶಿಸ್ತು ನೋಡಿ, ಸಚಿವರು ಗುಡ್​ ಎಂದರು. ಈಗಾಗಲೇ ಜಿಲ್ಲೆಗೆ ಅನುಮತಿ ನೀಡಿರುವ ಹೊಸ ವಸತಿ ನಿಲಯಗಳನ್ನು ಶೀಘ್ರವೇ ಆರಂಭಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.

Leave a Reply

Your email address will not be published. Required fields are marked *