ಮಕ್ಕಳೊಂದಿಗೆ ಬಿಸಿಊಟ ಸವಿದ ಶಿಕ್ಷಣ ಸಚಿವರು : ಮರುಕಳಿಸಿದೆ ದಾಸೋಹದಿಂದ ಹೆಚ್ಚಾದ ಹಾಜರಾತಿ

ತಿಪಟೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಸರಕಾರಿ, ಅನುದಾನಿತ ಶಾಲೆಗಳಲ್ಲಿ ಸ್ಥಗಿತವಾಗಿದ್ದ ಬಿಸಿಯೂಟ ಯೋಜನೆ ಗುರುವಾರದಿಂದ ರಾಜ್ಯಾದ್ಯಂತ ಆರಂಭವಾಗಿದ್ದು, 6ನೇ ತರಗತಿಗೂ ಮೇಲ್ಪಟ್ಟ ಮಕ್ಕಳು ಖುಷಿಯಿಂದಲೇ ಮಧ್ಯಾಹ್ನದ ಬಿಸಿಯೂಟ ಸವಿದರು.

ಸ್ವಕ್ಷೇತ್ರ ತಿಪಟೂರಿನ ಸರಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟೆ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಬಿಸಿಯೂಟ ವ್ಯವಸ್ಥೆ ಪರಿಶೀಲಿಸಿ ತಾವೇ ಖುದ್ದು ಮಕ್ಕಳಿಗೆ ಬಡಿಸಿ ಸವಿಯುವ ಮೂಲಕ ಬಿಸಿಯೂಟಕ್ಕೆ ಮರುಚಾಲನೆಕೊಟ್ಟರು.

ಶತಾಯುಷಿ ಶ್ರೀಗಳು ಓದಿದ ಶಾಲೆಯಲ್ಲಿ ಸಂಭ್ರಮ: ಸಿದ್ಧಗಂಗೆಯ ಶತಾಯುಷಿ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರು ಓದಿದ ನಗರದ ಸರಕಾರಿ ಜೂನಿಯರ್ ಕಾಲೇಜು ಪ್ರಾಂಗಣದ ಪ್ರೌಢಶಾಲಾ ವಿಭಾಗದಲ್ಲಿ ಹಾಜರಿದ್ದ 125ಕ್ಕೂ ಅಧಿಕ ಮಕ್ಕಳಿಗೆ ಪಲಾವ್ ಹಾಗೂ ಪಾಯಸ ವಿತರಿಸಲಾಯಿತು. ಬಿಸಿಯೂಟ ಗುರುವಾರದಿಂದ ವಿತರಿಸುವ ಕಾರಣಕ್ಕೆ ಹಿಂದಿನ ದಿನಗಳಿಗಿಂತ ಹೆಚ್ಚು ಹಾಜರಿ ಕಂಡುಬಂದಿದ್ದು ಗಮನಸೆಳೆಯಿತು.

ಮರುಕಳಿಸಿದೆ ದಾಸೋಹ:

ಶಾಲೆಯ ಸಂಸ್ಕೃತ ಶಿಕ್ಷಕ ಬಸವಲಿಂಗ ಸ್ವಾಮಿ ಮಾತನಾಡಿ, ಈ ಶಾಲ್ಲೆ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅಭ್ಯಾಸ ಮಾಡಿದ ಶಾಲೆ. ಅವರು ಗತಿಸುವವರೆಗೂ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿದ್ದರು. ಅಂತಹ ಶಾಲೆಯಲ್ಲಿ ನಡೆಯುತ್ತಿರುವ ಬಿಸಿಯೂಟ ಯೋಜನೆ ನಿಜಕ್ಕೂ 12 ನೆ ಶತಮಾನದಲ್ಲಿ ಬಸವಣ್ಣನವರ ದಾಸೋಹವನ್ನು ನೆನಪಿಸುತ್ತದೆ. ಜಾತ್ಯಾತೀತವಾಗಿ ಎಲ್ಲಾ ಮಕ್ಕಳು ಸಹ ಕಲೆತು ಖುಷಿ ಖುಷಿಯಾಗಿ ಊಟ ಮಾಡುತ್ತಿದ್ದಾರೆಂದರು.

ಬಿಸಿಯೂಟದಿಂದ ಹೆಚ್ಚಿದ ಹಾಜರಾತಿ:

ಶಾಲೆಯ ಮುಖ್ಯ ಶಿಕ್ಷಕಿ ನೂರ್ ಫಾತೀಮಾ ಮಾತನಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಒಟ್ಟು 297 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಈಗ 125 ಮಕ್ಕಳು ಹಾಜರಿದ್ದಾರೆ. ಬಿಸಿಯೂಟ ನಿಲ್ಲಿಸಿದ್ದರಿಂದ ಮಕ್ಕಳು ತೊಂದರೆ ಅನುಭವಿಸುತ್ತಿದ್ದರು. ಈಗ ಖುಷಿಯಿಂದ ಊಟ ಮಾಡುತ್ತಿದ್ದಾರೆ. ಬಿಸಿಯೂಟ ಪ್ರಾರಂಭವಾಗಿರುವ ಬಗ್ಗೆ ಮಕ್ಕಳ ಪೋಷಕರಿಗೆ ವಾಯ್ಸ್ ಮೆಸೇಜ್ ಮೂಲಕ ಮಾಹಿತಿ ಕಳುಹಿಸಲಾಗಿತ್ತು. ಬಿಸಿಯೂಟ ಪ್ರಾರಂಭವಗಿರುವುದು ಮಕ್ಕಳಿಗೆ ಅನುಕೂಲವಾಗಿದೆ. ಹಾಜರಾತಿಯೂ ಹೆಚ್ಚಳವಾಗಿದೆ. ತಾತ್ಕಾಲಿಕವಾಗಿ ಇಲಾಖೆ ಸೂಚನೆಯಂತೆ ಶಾಲೆಯ ಅನುದಾನದಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಿ ವಿತರಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.


ನಮ್ಮ ಮನೆಯಲ್ಲಿ ಅಪ್ಪ-ಅಮ್ಮ ಇಬ್ಬರು ಕೂಲಿಗೆ ಹೋಗುತ್ತಿದ್ದರು. ನಮಗೆ ಶಾಲೆಗೆ ಡಬ್ಬಿಗೂ ಹಾಕಿ ಕಳುಹಿಸಿಕೊಡುವುದು ಅಮ್ಮನಿಗೆ ಕಷ್ಟವಾಗುತ್ತಿತ್ತು. ಇದೀಗ ಶಾಲೆಯಲ್ಲಿ ಮತ್ತೆ ಬಿಸಿಯೂಟ ಆರಂಭವಾಗಿದ್ದು ನನಗೆ ಖುಷಿ ತಂದಿದೆ.

ಮೇಘನಾ, ಬಿಸಿಯೂಟ ಸವಿದ ಹತ್ತನೇ ತರಗತಿ ವಿದ್ಯಾರ್ಥಿನಿ

ಕೋವಿಡ್ ಪ್ರಮಾಣ ತಗ್ಗುತ್ತಿರುವುದು ಶೈಕ್ಷಣಿಕ ಚಟುವಟಿಕೆಗಳು ಹಂತ ಹಂತವಾಗಿ ಮೊದಲ ಸ್ಥಿತಿಗೆ ಬರಲು ಆಸ್ಪದ ಒದಗಿಸಿದೆ. ಮಕ್ಕಳಲ್ಲಿ ಪೌಷ್ಠಿಕತೆಯ ವೃದ್ಧಿ ಬಿಸಿಯೂಟ ಪ್ರಾರಂಭದ ಅವಶ್ಯಕತೆಯನ್ನು ನಮ್ಮ ಸರಕಾರ ಮನಗಂಡು ಗುರುವಾರದಿಂದ ಪುನರ್ ಆರಂಭಿಸಿದೆ. ಅ.25ರಿಂದ 1 ರಿಂದ 10ನೇತರಗತಿವರೆಗಿನ ಎಲ್ಲಾ ಸರಕಾರಿ ಶಾಲಾ ಮಕ್ಕಳಿಗೂ ಬಿಸಿಯೂಟ ಉಣಬಡಿಸಲಾಗುವುದು.

-ಬಿ.ಸಿ.ನಾಗೇಶ್, ಶಿಕ್ಷಣ ಸಚಿವರು

Pragati TV Social Connect for more latest u

Leave a Reply

Your email address will not be published. Required fields are marked *