ಹಳದಿ ಮೆಟ್ರೋ ಲೋಕಾರ್ಪಣೆಗೆ ಬೆಂಗಳೂರಿಗೆ ಮೋದಿ | Modi to inaugurate Yellow Metro Lane

Modi to inaugurate Yellow Metro Lane

ಬೆಂಗಳೂರು: ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ ಲಾಲ್‌ ಖಟ್ಟರ್‌ ಹಾಗೂ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಗಸ್ಟ್ 10ರಂದು ಪ್ರಧಾನಿ ಬೆಂಗಳೂರು ಮೆಟ್ರೋದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ 16 ನಿಲ್ದಾಣಗಳನ್ನೊಳಗೊಂಡ 5,056.99 ಕೋಟಿ ರೂ. ವೆಚ್ಚದ 19.15 ಕಿ.ಮೀ ಉದ್ದದ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಬೆಂಗಳೂರು ಮೆಟ್ರೋ ಹಂತ-3ರ 15,611 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 44.65 ಕಿ.ಮೀ. ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ಒಪ್ಪಿಕೊಂಡಿದ್ದಾರೆ ಎಂದು ಘೋಷಿಸಲು ನನಗೆ ಸಂತಸವಾಗುತ್ತಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ ಲಾಲ್‌ ಖಟ್ಟರ್‌ ತಿಳಿಸಿದ್ದಾರೆ.

ಆಗಸ್ಟ್ 10ಕ್ಕೆ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಇದು ಬೆಂಗಳೂರು ದಕ್ಷಿಣಕ್ಕೆ ಒಂದು ಮಹತ್ವದ ದಿನವಾಗಿದೆ. ಅಂದು ಪ್ರಧಾನಿ ಮೆಟ್ರೋ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಜೊತೆಗೆ ಮೆಟ್ರೋ ಹಂತ-3 ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಎರಡು ಯೋಜನೆಗಳಿಂದ ಸುಮಾರು 25 ಲಕ್ಷ ಜನರು ಲಾಭ ಪಡೆಯಲಿದ್ದಾರೆ ಎಂದು ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.

ಬೆಂಗಳೂರು ದಕ್ಷಿಣ ಭಾಗ ಒಂದಕ್ಕೇ ಸುಮಾರು 20,000 ಕೋಟಿ ರೂ. ಮೊತ್ತದಷ್ಟು ಹಣವನ್ನು ಮೆಟ್ರೋ ಮೂಲಸೌಕರ್ಯಕ್ಕೆ ಮೀಸಲಿಟ್ಟ ಪ್ರಧಾನಿ ಮೋದಿಗೆ ನಾವು ಋಣಿಯಾಗಿದ್ದೇವೆ. ಬೆಂಗಳೂರಿನ ಜನರ ಪರವಾಗಿ ನಾನು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ಈ ಹಳದಿ ಮೆಟ್ರೋ ಮಾರ್ಗದಿಂದ ಸುಮಾರು 8 ಲಕ್ಷ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *