ಮೋದಿ ಸೋತರು ಅಹಂಕಾರ ಕಡಿಮೆಯಾಗಿಲ್ಲ : ಖರ್ಗೆ ಹೀಗೆಂದಿದ್ದಾದರೂ ಯಾಕೆ

ನವದೆಹಲಿ: ಮೋದಿ 3.0 ಸರ್ಕಾರದ ಲೋಕಸಭೆ ಕಲಾಪಕ್ಕೆ ಮುನ್ನ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೈತಿಕವಾಗಿ ಸೋತರೂ ಮೋದಿ ಅಹಂಕಾರ ಕಡಿಮೆಯಾಗಿಲ್ಲ ಎಂದಿದ್ದಾರೆ.

ಹಂಗಾಮಿ ಸ್ಪೀಕರ್ ವಿಚಾರದಲ್ಲಿ ಇಂದು ಕಲಾಪಕ್ಕೆ ಆರಂಭಕ್ಕೆ ಮುನ್ನವೇ ಗದ್ದಲವೆಬ್ಬಿಸಿರುವ ವಿಪಕ್ಷಗಳು ಪ್ರತಿಭಟನಾರ್ಥವಾಗಿ ನೂತನ ಸಂಸದರ ಪ್ರಮಾಣ ವಚನ ಸ್ವೀಕಾರ ಕಾರ್ಯದಲ್ಲಿ ಭಾಗಿಯಾಗುವುದಿಲ್ಲ ಎಂದಿವೆ.ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ ಸುದೀರ್ಘವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಮೋದಿ ಇಂದು ಎಂದಿಗಿಂತ ಹೆಚ್ಚು ಉದ್ದದ ಭಾಷಣ ಮಾಡಿದ್ದಾರೆ. ಇತ್ತೀಚೆಗೆ ಚುನಾವಣೆಯಲ್ಲಿ ನೈತಿಕವಾಗಿ ಮತ್ತು ರಾಜಕೀಯವಾಗಿ ಸೋತರೂ ಮೋದಿ ಅಹಂಕಾರ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಮೋದಿ ಕೆಲವು ಮುಖ್ಯ ವಿಚಾರಗಳ ಬಗ್ಗೆ ಮೋದಿ ಮಾತನಾಡಬಹುದು ಎಂದು ಜನ ನಿರೀಕ್ಷೆಯಲ್ಲಿದ್ದರು.

ನೀಟ್ ಪರೀಕ್ಷೆ ವಿಚಾರದಲ್ಲಿ ನಡೆದ ಅಕ್ರಮಗಳನ್ನು ಸರಿಪಡಿಸುವ ಬಗ್ಗೆ ಮಾತನಾಡುವ ಬದಲು ಯುವ ಜನರ ಅನುಕಂಪ ಗಿಟ್ಟಿಸಲು ಭಾಷಣ ಮಾಡುತ್ತಾರೆ. ಇತ್ತೀಚೆಗೆ ಪಶ್ಚಿಮ ಬಂಗಾಲದಲ್ಲಿ ನಡೆದ ರೈಲು ದುರಂತದ ಬಗ್ಗೆಯೂ ಮೋದಿಜಿ ಮಾತನಾಡಿಲ್ಲ. ಮಣಿಪುರ ಕಳೆದ 13 ತಿಂಗಳಿನಿಂದ ಹಿಂಸಾಚಾರದಲ್ಲಿ ಮುಳುಗಿದೆ. ಅದರ ಬಗ್ಗೆಯೂ ಮೌನವಾಗಿದ್ದಾರೆ. ಅಸ್ಸಾಂ ಪ್ರವಾಹದ ಬಗ್ಗೆಯೂ ಕ್ರಮವಿಲ್ಲ. ಪ್ರಮುಖ ವಿಚಾರದಲ್ಲಿ ಮೌನವಾಗಿರುವ ಮೋದಿಜಿ ವಿಪಕ್ಷಗಳಿಗೆ ಸಲಹೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.

50 ವರ್ಷ ಹಿಂದಿನ ತುರ್ತು ಪರಿಸ್ಥಿತಿ ಬಗ್ಗೆ ಮೋದಿಜಿ ಮಾತನಾಡುತ್ತಾರೆ. ಆದರೆ ದೇಶದಲ್ಲಿ ಕಳೆದ 10 ವರ್ಷಗಳಿಂದ ಸದ್ದಿಲ್ಲದೇ ಹೇರಲಾಗಿರುವ ತುರ್ತು ಪರಿಸ್ಥಿತಿ ಬಗ್ಗೆ ಮರೆತು ಹೋಗಿದ್ದಾರೆ. ಜನ ಮೋದಿ ಜಿ ವಿರುದ್ಧವಾಗಿ ತೀರ್ಪು ನೀಡಿದ್ದಾರೆ. ಹಾಗಿದ್ದರೂ ಅವರು ಅಧಿಕಾರಕ್ಕೆ ಬಂದಿದ್ದಾರೆ ಎಂದರೆ ಕೆಲಸ ಮಾಡಬೇಕು. ಜನರಿಗೆ ಕೆಲಸವಾಗಬೇಕು, ಘೋಷಣೆಗಳಲ್ಲ ಎನ್ನುವುದು ಅವರಿಗೇ ಅನ್ವಯವಾಗುತ್ತದೆ.

ನಾವು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲಿದ್ದೇವೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ನೂತನ ಸಂಸತ್ ಕಲಾಪಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ವಿಪಕ್ಷಗಳು ಘೋಷಣೆಗಳನ್ನು ಕೂಗುವುದು ಬಿಟ್ಟು ರಚನಾತ್ಮಕ ವಿಪಕ್ಷಗಳಾಗಿ ಕೆಲಸ ಮಾಡಲಿ ಎಂದಿದ್ದರು. ಅದಕ್ಕೆ ಖರ್ಗೆ ಈ ರೀತಿ ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *