ಮದ್ಯ,​ ಮಾದಕ ದ್ರವ್ಯ ಸೇವನೆಯಿಂದ 30 ಲಕ್ಷಕ್ಕೂ ಹೆಚ್ಚು ಮಂದಿ ಸಾವು

ನವದೆಹಲಿ: ಮದ್ಯ​ ಮತ್ತು ಸೈಕೋಆ್ಯಕ್ಟಿವ್​ ಮಾದಕ ದ್ರವ್ಯಗಳ ಸೇವನೆಯಿಂದ 2019ರಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ತಿಳಿಸಿದೆ. ವಾರ್ಷಿಕವಾಗಿ ಸಂಭವಿಸುವ ಶೇ 4.6ರಷ್ಟು ಸಾವಿನಲ್ಲಿ ಮದ್ಯ​ ಸೇವನೆಯಿಂದ 26 ಲಕ್ಷ ಹಾಗು ಉಳಿದ ಸಾವಿನ ಪ್ರಮಾಣ ಡ್ರಗ್ಸ್‌​​ ಬಳಕೆಯಿಂದ ಸಂಭವಿಸಿದೆ ಎಂದು ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಹೇಳುತ್ತದೆ.

ಮದ್ಯ ಮತ್ತು ಮಾದಕ ದ್ರವ್ಯಗಳ ಬಳಕೆ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ದೀರ್ಘಾವಧಿ ಕಾಯಿಲೆ ಮತ್ತು ಮಾನಸಿಕ ಅನಾರೋಗ್ಯ ಉಂಟುಮಾಡುತ್ತದೆ. ಕುಟುಂಬ ಮತ್ತು ಸಮುದಾಯದ ಮೇಲೂ ಹೆಚ್ಚಿನ ಹೊರೆ ಮತ್ತು ಅಪಘಾತ, ಗಾಯ ಮತ್ತು ಹಿಂಸಾಚಾರಕ್ಕೂ ಕಾರಣವಾಗುತ್ತದೆ ಎಂದು ಡಬ್ಲ್ಯೂಎಚ್​ಒನ ಪ್ರಧಾನ ನಿರ್ದೇಶಕ ಡಾ.ಟೆಡ್ರೋಸ್​ ಅಧನೊಮ್​ ಗೇಬ್ರೆಯೋಸಸ್ ಹೇಳಿದ್ದಾರೆ.

ಮದ್ಯ​ ಹೊರತಾಗಿ ಸಾವನ್ನಪ್ಪುವ ಸಂಖ್ಯೆಯಲ್ಲಿ ಸಾಂಕ್ರಾಮಿಕೇತರ ರೋಗಗಳಿಂದ ಸಂಭವಿಸುವ ಸಾವುಗಳ ಪ್ರಮಾಣ 16 ಲಕ್ಷ ಆಗಿದ್ದರೆ, ಹೃದಯ ರಕ್ತನಾಳ ಸಮಸ್ಯೆಗಳಿಂದ 4 ಲಕ್ಷಕ್ಕೂ ಹೆಚ್ಚು, ಕ್ಯಾನ್ಸರ್​ನಿಂದ 4 ಲಕ್ಷಕ್ಕೂ ಹೆಚ್ಚು, ಇತರೆ ಗಾಯ, ಅಪಘಾತದ, ಸ್ವಯಂ ಹಾನಿ ಮತ್ತು ವ್ಯಕ್ತಿಗಳ ನಡುವಿನ ಹಿಂಸಾಚಾರದಿಂದ 7 ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸುತ್ತದೆ. ಇನ್ನು ಎಚ್​ಐವಿ, ಟಿಬಿಗಳಂತಹ ಸಾಂಕ್ರಾಮಿಕ ರೋಗದಿಂದ 2 ಲಕ್ಷಕ್ಕಿಂತ ಹೆಚ್ಚು ಸಾವು ಘಟಿಸಿದೆ. 20ರಿಂದ 39 ವರ್ಷದ ಯುವ ಜನತೆಯಲ್ಲಿ ಆಲ್ಕೋಹಾಲ್​ ಸಂಬಂಧಿ ಸಾವಿನ ಪ್ರಕರಣ 2019ರಲ್ಲಿ ಹೆಚ್ಚಿದೆ.

ಈ ಹಿನ್ನೆಲೆಯಲ್ಲಿ ಜಾಗತಿಕವಾಗಿ 2030ರ ಹೊತ್ತಿಗೆ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವ ನಿಟ್ಟಿನಲ್ಲಿ ತುರ್ತಾಗಿ ಕ್ರಮಕ್ಕೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಆಲ್ಕೋಹಾಲ್​ ಮತ್ತು ಮಾದಕ ವಸ್ತುಗಳ ಸೇವನೆ ತಗ್ಗಿಸಿ, ಗುಣಮಟ್ಟದ ಚಿಕಿತ್ಸೆಗೆ ಒತ್ತು ನೀಡಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ಕೊಟ್ಟಿದೆ.

Leave a Reply

Your email address will not be published. Required fields are marked *