ನಾಪತ್ತೆಯಾಗಿದ್ದ IAS​ ಅಧಿಕಾರಿ ಪೂಜಾ ಖೇಡ್ಕರ್​​ ತಾಯಿ ಬಂಧನ

ಪುಣೆ: ಅಧಿಕಾರ ದುರ್ಬಳಕೆ ಆರೋಪದ ಮೂಲಕ ಸದ್ದು ಮಾಡಿದ್ದ ಪ್ರೊಬೆಷನರಿ ಐಎಎಸ್​​ ಅಧಿಕಾರಿ ಪೂಜಾ ಖೇಡ್ಕರ್​​​ ಅವರ ತಾಯಿ ಮನೋರಮಾ ಖೇಡ್ಕರ್​ರನ್ನು ಪೊಲೀಸರು ಬಂಧಿಸಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಬಳಿಕ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ, ಜುಲೈ 20ರವರೆಗೆ ಪೊಲೀಸ್​ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಭೂ ವಿವಾದದಲ್ಲಿ ಪಿಸ್ತೂಲ್ ಹಿಡಿದು ವ್ಯಕ್ತಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಪುಣೆಯ ಮುಲ್ಶಿ ಎಂಬ ಪ್ರದೇಶದಲ್ಲಿ ರೈತನ ಜಮೀನು ಕಬಳಿಸಲು ಅವರಿಗೆ ಪಿಸ್ತೂಲ್​ ಹಿಡಿದು ಬೆದರಿಕೆ ಹಾಕಿದ್ದ ಅವರ ವಿಡಿಯೋ ವಾರದ ಹಿಂದೆ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದಾದ ಬಳಿಕ ಮನೋರಮಾ ನಾಪತ್ತೆಯಾಗಿದ್ದರು. ಇದೀಗ ಅವರನ್ನು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾದ್​ನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪುಣೆ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಮನೋರಮಾ ಮತ್ತು ಅವರ ಪತಿ ದಿಲೀಪ್​ ಖೇಡ್ಕರ್ ಹಾಗೂ ಐವರು ಸಹಚರರ​ನ್ನು ಬಂಧಿಸಲು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದರು. ಇದಕ್ಕಾಗಿ ಹಲವು ತಂಡಗಳನ್ನು ರಚಿಸಲಾಗಿತ್ತು. ಇವರೆಲ್ಲಾ ರಾಯಗಢ ಜಿಲ್ಲೆಯ ಮಹಾಡ್ ಪಟ್ಟಣದ ಸಮೀಪವಿರುವ ಹೋಂಸ್ಟೇನಲ್ಲಿ ಇದ್ದರು ಎಂಬ ಮಾಹಿತಿ ಆಧಾರದ ಮೇಲೆ ಪುಣೆ ಗ್ರಾಮಾಂತರ ಪೊಲೀಸ್​ ತಂಡ ತೆರಳಿ, ಅವರನ್ನು ಬಂಧಿಸಿದ್ದಾರೆ. ಖೇಡ್ಕರ್ ದಂಪತಿ ಮತ್ತು ಇತರ ಐವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿ 323 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *