ಬೆಂಗಳೂರು: ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಹೈ ಕಮಾಂಡ್ ಕಸರತ್ತು ನಡೆಸುತ್ತಿದ್ದು, ಇದರ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎದುರಾಳಿಗಳ ತಂತ್ರ ವಿಫಲಗೊಳಿಸಲು ತಂತ್ರ ರೂಪಿಸಲು ಮುಂದಾಗಿದ್ದಾರೆ.
ಮುಡಾ ಹಗರಣ ಸಂಬಂಧ ಆಗಸ್ಟ್ 29ರಂದು ಹೈಕೋರ್ಟ್ ತೀರ್ಪು ನೀಡಲಿದ್ದು, ನ್ಯಾಯಾಲಯದ ಆದೇಶ ಸಿದ್ದರಾಮಯ್ಯ ವಿರುದ್ಧ ಬಂದಿದ್ದೇ ಆದರೆ, ನಾಯಕತ್ವ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ಸಿದ್ದರಾಮಯ್ಯ ಅವರು ಇದೀಗ ಹಿಂದುಳಿದ ವರ್ಗಗಳು ಮತ್ತು SC/ST ಸಮುದಾಯಗಳಿಂದ ಬೆಂಬಲ ಪಡಯಲು ತಂತ್ರ ರೂಪಿಸುತ್ತಿದ್ದಾರೆಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕುರುಬ ಸಮುದಾಯದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದ ಮಠಾಧೀಶರ ಗುಂಪೊಂದು ಒಗ್ಗಟ್ಟು ಪ್ರದರ್ಶಿಸಿತು.
ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾದಾಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸಿದ್ದರು. ಅವರಿಗೆ ಧಾರ್ಮಿಕ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಕೂಡ ನಾಯಕತ್ವನ್ನು ಹಠಾತ್ತನೆ ಕೆಳಗಿಳಿಸದೆ, ಸುಗಮ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವುದು ಉತ್ತಮ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ಶೋಷಿತ ಸಮುದಾಯಗಳ ಒಕ್ಕೂಟ (ದೀನ ದಲಿತರ ವೇದಿಕೆ) ಸದಸ್ಯರು ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜಭವನಕ್ಕೆ ಮೆರವಣಿಗೆ ನಡೆಸಿ, ನಂತರ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.