ಮೈಸೂರು ದಸರಾ || ಗಜಪಯಣಕ್ಕೆ ಇಂದು ಚಾಲನೆ | Mysore Dasara Gajapayana

Mysore Dasara Gajapayana

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಕಾಡಿನಿಂದ ನಾಡಿಗೆ ಗಜಪಡೆಯನ್ನು ಸ್ವಾಗತಿಸುವ ಗಜಪಯಣ ಕಾರ್ಯಕ್ರಮಕ್ಕೆ ಇಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ವೀರನಹೊಸಳ್ಳಿಯ ಬಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಲಿದೆ.

ವೀರನಹೊಸಳ್ಳಿ ಗ್ರಾಮದ ಬಳಿ ಮಧ್ಯಾಹ್ನ 12.34ರಿಂದ 12.59ರ ತುಲಾ ಲಗ್ನದಲ್ಲಿ ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣ ಆರಂಭವಾಗಲಿದೆ.

ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಒಟ್ಟು 14 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ, 9 ಆನೆಗಳ ಮೊದಲ ತಂಡ ಅಭಿಮನ್ಯು ನೇತೃತ್ವದಲ್ಲಿ ಮೈಸೂರು ನಗರಕ್ಕೆ ಆಗಮಿಸಲಿದೆ. ಗಜಪಡೆಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸುವ ಕಾರ್ಯಕ್ರಮ ಇದಾಗಿದೆ.

ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸ್ಥಳೀಯ ಶಾಸಕ ಜಿ.ಡಿ.ಹರೀಶ್ ಗೌಡ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಬಾರಿ ದಸರಾ ಮಹೋತ್ಸವದಲ್ಲಿ 4 ಹೆಣ್ಣಾನೆಗಳು ಸೇರಿದಂತೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ಪಾಲ್ಗೊಳ್ಳಲಿವೆ. ಅಭಿಮನ್ಯು, ಭೀಮ, ಕಂಜನ್, ಧನಂಜಯ, ಪ್ರಶಾಂತ, ಮಹೇಂದ್ರ, ಏಕಲವ್ಯ ಮತ್ತು ಹೆಣ್ಣಾನೆಗಳಾದ ಕಾವೇರಿ ಹಾಗೂ ಲಕ್ಷ್ಮೀ ಸೇರಿ 9 ಆನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಲಿವೆ.

ಬಳಿಕ 5 ಆನೆಗಳು ಎರಡನೇ ಹಂತದಲ್ಲಿ ಬರಲಿದ್ದು, ಅವುಗಳ ಆಯ್ಕೆ ಇನ್ನೂ ಆಗಿಲ್ಲ. ಅಲ್ಲದೆ, ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳ ಜೊತೆ ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಹಾಗೂ ಕುಟುಂಬದ ಇತರ ಸದಸ್ಯರು ಸೇರಿ 40 ಕುಟುಂಬಗಳಿಂದ 120 ಜನರು ಆಗಮಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *