ನವದೆಹಲಿ: ನಿನ್ನೆ ರಾತ್ರಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ, ನಮ್ಮ ದೇಶದ ಹೆಣ್ಣುಮಕ್ಕಳ ಈ ಯಶಸ್ಸು ಲಕ್ಷಾಂತರ ಯುವತಿಯರಿಗೆ ದೊಡ್ಡ ಕನಸು ಕಾಣಲು ಸ್ಫೂರ್ತಿ ನೀಡುತ್ತದೆ ಎಂದು ಮೋದಿ ಬಣ್ಣಿಸಿದ್ದಾರೆ. ಇಂದು ಬಿಹಾರದ ಸಹರ್ಸಾದಲ್ಲಿ ನಡೆದ ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಮ್ಮ ಮಹಿಳಾ ಕ್ರಿಕೆಟ್ ತಂಡದ ಅದ್ಭುತ ಗೆಲುವಿಗೆ ನಾನು ಅಭಿನಂದಿಸಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಈ ವೇಳೆ ಭಾರತದ ಕ್ರಿಕೆಟ್ ಆಟಗಾರ್ತಿಯರ ದೃಢನಿಶ್ಚಯ ಮತ್ತು ಬದ್ಧತೆಯನ್ನು ಶ್ಲಾಘಿಸಿದ್ದಾರೆ. ನಿಮ್ಮ ಈ ಯಶಸ್ಸು ಲಕ್ಷಾಂತರ ಯುವತಿಯರಿಗೆ ದೊಡ್ಡ ಕನಸು ಕಾಣಲು ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರಣೆ ನೀಡುತ್ತದೆ ಎಂಬುದು ಖಚಿತ. ನಮಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ, ನಾವು ಗರ್ವದಿಂದ ಬೀಗುವಂತೆ ಮಾಡಿದ್ದೀರಿ ಎಂದು ಮೋದಿ ಹೇಳಿದ್ದಾರೆ.
“ನಮ್ಮ ಮಹಿಳಾ ಕ್ರಿಕೆಟ್ ತಂಡವನ್ನು ಮಾತ್ರವಲ್ಲದೆ ಅವರ ಪೋಷಕರನ್ನೂ ನಾನು ಅಭಿನಂದಿಸಲು ಬಯಸುತ್ತೇನೆ. ಮಹಿಳೆಯರಿಗೆ ಸರಿಯಾದ ನಿರ್ದೇಶನ ಮತ್ತು ಅವಕಾಶಗಳನ್ನು ನೀಡಿದಾಗ ಮಾತ್ರ ಇಂತಹ ಅದ್ಭುತವಾದ ಫಲಿತಾಂಶಗಳನ್ನು ನೋಡಲು ಸಾಧ್ಯ. ಇಂದು, ನಮ್ಮ ಹೆಣ್ಣುಮಕ್ಕಳು ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ, ಗಡಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ನಮ್ಮ ರಾಷ್ಟ್ರವನ್ನು ರಕ್ಷಿಸುತ್ತಿದ್ದಾರೆ. ಒಂದು ಕಾಲದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನವನ್ನು ಅಪಹಾಸ್ಯ ಮಾಡಿದವರು ಈಗ ಅದರ ಪರಿಣಾಮವನ್ನು ನೋಡುತ್ತಿದ್ದಾರೆ. ನಮ್ಮ ಸರ್ಕಾರ ನಾರಿ ಶಕ್ತಿಯನ್ನು ಉತ್ತೇಜಿಸಲು ನಿರಂತರವಾಗಿ ಕೆಲಸ ಮಾಡಿದೆ ಹಾಗೂ ಮಾಡುತ್ತಲೇ ಇದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
For More Updates Join our WhatsApp Group :
