ಬೆಂಗಳೂರು: ಬೆಂಗಳೂರು ಎಲ್ಲದರಲ್ಲೂ ಮುಂದು ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ. ಅದರಲ್ಲೂ ಕೊಲೆ, ದರೋಡೆ, ಆತ್ಮಹತ್ಯೆ ಪ್ರಕರಣಗಳಲ್ಲೂ ಬೆಂಗಳೂರು ಮುಂದೆ ಎಂಬುದು ವಿಪರ್ಯಾಸ. ಇದೀಗ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲೂ ಬೆಂಗಳೂರು ಮುಂದೆ ಎಂಬುದು ಸಾಬೀತಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ಅಂಕಿಅಂಶಗಳ ಪ್ರಕಾರ, 2023 ರಲ್ಲಿ ಬೆಂಗಳೂರಿನಲ್ಲಿ 292 ಪಾದಚಾರಿ ಸಾವುಗಳು ಸಂಭವಿಸಿದ್ದವು. ಪಾದಾಚಾರಿ ಮಾರ್ಗಗಳ ಅತಿಕ್ರಮಣ, ಹಾಳಾದ ವಿದ್ಯುತ್ ಕಂಬಗಳು, ತಂತಿಗಳು, ಟ್ರಾನ್ಸ್ಫಾರ್ಮರ್ಗಳು ಇತ್ಯಾದಿ ಅವ್ಯವಸ್ಥೆಗಳೇ ಪಾದಾಚಾರಿಗಳಿಗೆ ಕುತ್ತು ತಂದೊಡ್ಡುತ್ತಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಸಾರ್ವಜನಿಕ ಸ್ಥಳಗಳ ಪರಿಶೀಲನೆ ವೇಳೆ ಈ ಗಂಭೀರ ಸಮಸ್ಯೆಯನ್ನ ಮನಗಂಡಿದ್ದಾರೆ. ಹೀಗಾಗಿಯೇ ಬೆಸ್ಕಾಂ, ಕೆಪಿಟಿಸಿಎಲ್, ಜಲಮಂಡಳಿ ಸೇರಿ ಯಾವ್ಯಾವ ನಾಗರಿಕ ಸೇವಾ ಸಂಸ್ಥೆಗಳು ಫುಟ್ ಪಾತ್, ರಸ್ತೆ ಸೇರಿ ಸಾರ್ವಜನಿಕ ಸ್ಥಳಗಳನ್ನ ಬಳಸಿಕೊಳ್ಳುತ್ತವೆಯೋ, ಅವೆಲ್ಲವೂ ತಮಗೆ ಸೇರಿದ ಪ್ರಾಪರ್ಟಿಗಳ ಮೇಲೆ ಸ್ಥಳೀಯ ಅಧಿಕಾರಿಗಳ ಮಾಹಿತಿ ಸಹಿತ ಕ್ಯೂರ್ ಕೋಡ್ ಅಂಟಿಸಲು ಸೂಚನೆ ನೀಡುವುದಾಗಿ ಜಿಬಿಎ ಹೇಳಿದೆ.
ಅಧಿಕಾರಿಗಳ ಮಾಹಿತಿ ಜತೆಗೆ, ಕ್ಯೂರ್ ಕೋಡ್ನಲ್ಲಿ ದೂರವಾಣಿ ಸಂಖ್ಯೆ ಕೂಡ ಇರುವುದರಿಂದ ಸಾರ್ವಜನಿಕರು ನೇರವಾಗಿ ಕರೆ ಮಾಡಿ ದೂರು ನೀಡಬಹುದಾಗಿದೆ. ಇದರಿಂದಾಗಿ ಸಮಸ್ಯೆಯ ಪರಿಹಾರಕ್ಕೆ ತಕ್ಷಣದ ಕ್ರಮ ಕೈಗೊಳ್ಳಬಹುದು ಎಂಬುದು ಜಿಬಿಎ ಲೆಕ್ಕಾಚಾರ.
ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಪಾದಾಚಾರಿಗಳ ಪರದಾಟ ಕೇಳುವವರೇ ಇಲ್ಲದಂತಾಗಿದ್ದು, ಅವ್ಯವಸ್ಥೆಗೆ ಕೊನೆ ಬಿದ್ದಿಲ್ಲ. ಇನ್ನಾದರೂ ಬೆಂಗಳೂರಿನ ರಸ್ತೆಗಳು ಹಾಗೂ ಫುಟ್ಪಾತ್ಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣವಾಗಲಿ.
For More Updates Join our WhatsApp Group :
