ನವದೆಹಲಿ: ಬಿಹಾರದ ಮಾದರಿಯಲ್ಲಿ ಇಡೀ ದೇಶಾದ್ಯಂತ ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಮುಂದಾಗಿದೆ. ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮತದಾರರ ಪಟ್ಟಿಯ ಸಮಗ್ರತೆಯನ್ನು ರಕ್ಷಿಸಲು ತನ್ನ ಸಾಂವಿಧಾನಿಕ ಆಶಯವನ್ನು ಪೂರೈಸಲು ಆಯೋಗವು ಈಗ ಇಡೀ ದೇಶದಲ್ಲಿ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿಯ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ರಾಷ್ಟ್ರವ್ಯಾಪಿ ಈ ವೇಳಾಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುತ್ತದೆ.
ಬಿಹಾರದಲ್ಲಿ ಎಸ್ಐಆರ್ ಕುರಿತು ವಿರೋಧ ಪಕ್ಷಗಳ ಕೋಲಾಹಲದ ನಡುವೆಯೇ ಈ ಘೋಷಣೆ ಹೊರಬಿದ್ದಿದೆ. ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹಲವಾರು ಸಂದರ್ಭಗಳಲ್ಲಿ ಈ ಪ್ರಕ್ರಿಯೆಯನ್ನು ಟೀಕಿಸಿದ್ದಾರೆ ಮತ್ತು ರಾಜ್ಯದಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ಸುಳಿವು ನೀಡಿದ್ದಾರೆ.
ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಯ ವಿರುದ್ಧ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟ ಪಕ್ಷಗಳ ಹಲವಾರು ಸಂಸದರು ಗುರುವಾರ ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದ್ದರು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಹಿಂಪಡೆಯಬೇಕು, ಉಭಯ ಸದನಗಳಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಅವರು ಆಗ್ರಹಿಸಿದ್ದರು.
ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಮತದಾರರನ್ನು ವಂಚಿಸುವ ಗುರಿಯನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಆರೋಪಿಸಿ, ವಿರೋಧ ಪಕ್ಷಗಳು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ವಿರುದ್ಧ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಚುನಾವಣಾ ಆಯೋಗವು ಈ ಹಿಂದೆ ಹೇಳಿದ್ದ ಪ್ರಕಾರ, ಈ ಪರಿಷ್ಕರಣೆಯು ನಕಲಿ ಮತ್ತು ಅನರ್ಹ ಮತದಾರರನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ. ವಲಸಿಗರು ಚಿಂತಿಸಬೇಕಾಗಿಲ್ಲ ಎಂದು ಹೇಳಲಾಗಿದೆ.
ಕಾನೂನಿನ ಪ್ರಕಾರ ಅನರ್ಹ ಮತದಾರರನ್ನು ತೆಗೆದುಹಾಕುವ ಮೂಲಕ ಚುನಾವಣಾ ಸಮಗ್ರತೆಯನ್ನು ಎತ್ತಿಹಿಡಿಯುತ್ತದೆ ಎಂದು ಇಸಿ ಹೇಳಿತ್ತು. ಆಧಾರ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಪೌರತ್ವ ಪುರಾವೆಗಾಗಿ ಅಲ್ಲ, ಗುರುತಿನ ಪರಿಶೀಲನೆಗಾಗಿ ಬಳಸಲಾಗುತ್ತಿದೆ ಎಂದು ಇಸಿ ಅಫಿಡವಿಟ್ನಲ್ಲಿ ಸ್ಪಷ್ಟಪಡಿಸಿದೆ. ಎಸ್ಐಆರ್ನ ಕಾನೂನುಬದ್ಧತೆಯನ್ನು ಪರಿಶೀಲಿಸುತ್ತಿರುವ ಸುಪ್ರೀಂ ಕೋರ್ಟ್, ಜುಲೈ 28 ರಂದು ಮುಂದಿನ ಪ್ರಕರಣವನ್ನು ವಿಚಾರಣೆ ನಡೆಸಲಿದೆ.