ಯಾಸಿನ್ ಮಲಿಕ್​ಗೆ ಮರಣದಂಡನೆ ಕೋರಿ NIA ಅರ್ಜಿ

ಜಮ್ಮು ಮತ್ತು ಕಾಶ್ಮೀರ): ಭಯೋತ್ಪಾದನೆಗೆ ನಿಧಿ ಸಂಗ್ರಹ ಪ್ರಕರಣದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಅಮಿತ್ ಶರ್ಮಾ ಗುರುವಾರ ಹಿಂದೆ ಸರಿದಿದ್ದಾರೆ.

ನ್ಯಾಯಮೂರ್ತಿಗಳ ರೋಸ್ಟರ್‌ನಲ್ಲಿ ಬದಲಾವಣೆಯಿಂದಾಗಿ ನ್ಯಾ. ಪ್ರತಿಭಾ ಎಂ. ಸಿಂಗ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪ್ರಕರಣವನ್ನು ಪಟ್ಟಿ ಮಾಡಲಾಗಿದೆ. ಇದೇ ವೇಳೆ, ಅಮಿತ್ ಶರ್ಮಾ ಸದಸ್ಯರಲ್ಲದ ಮತ್ತೊಂದು ಪೀಠದ ಮುಂದೆ ಆಗಸ್ಟ್ 9ರಂದು ವಿಚಾರಣೆಗೆ ನಿಗದಿ ಮಾಡಿ ಎಂದು ನ್ಯಾ. ಪ್ರತಿಭಾ ಸಿಂಗ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥನಾಗಿರುವ ಯಾಸಿನ್ ಮಲಿಕ್ ಪ್ರಸ್ತುತ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇಂದು ಅರ್ಜಿ ವಿಚಾರಣೆ ವೇಳೆ, ಜೈಲಿನಿಂದಲೇ ವರ್ಚುಯಲ್​ ಮೂಲಕ ಹಾಜರು ಪಡಿಸಲಾಯಿತು. ಮುಂದಿನ ವಿಚಾರಣೆಗೂ ವರ್ಚುಯಲ್ ಮೂಲಕ​ ಹಾಜರು ಪಡಿಸುವುದನ್ನು ಮುಂದುವರಿಸುವಂತೆ ನ್ಯಾಯ ಪೀಠವು ನಿರ್ದೇಶಿಸಿದೆ.

ಯಾಸಿನ್ ಮಲಿಕ್‌ಗೆ ಮರಣದಂಡನೆ ಕೋರಿ ಎನ್‌ಐಎ 2023ರ ಮೇ 29ರಂದು ಅರ್ಜಿ ಸಲ್ಲಿಸಿದೆ. ಈ ಸಂಬಂಧ ಮಲಿಕ್‌ಗೆ ಹೈಕೋರ್ಟ್​ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಸಂದರ್ಭದಲ್ಲಿ ಹಾಜರಿರುವಂತೆ ಸೂಚಿಸಿತ್ತು. ಆದರೆ, ಜೈಲಿನ ಅಧಿಕಾರಿಗಳು, ಯಾಸಿನ್​ನನ್ನು ಅತ್ಯಂತ ಅಪಾಯಕಾರಿ ಕೈದಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ವರ್ಚುಯಲ್​ ಮೂಲಕ ಹಾಜರು ಪಡಿಸಲು ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ಮನವಿಯನ್ನು ಉಚ್ಚ ನ್ಯಾಯಾಲಯವು ಪುರಸ್ಕರಿಸಿತ್ತು.

Leave a Reply

Your email address will not be published. Required fields are marked *