Nimisha Priya ಮರಣದಂಡನೆ ಸಂಪೂರ್ಣವಾಗಿ ರದ್ದು; ಸಾ*ವು ಗೆದ್ದ ಕೇರಳದ ನರ್ಸ್

Nimisha Priya ಮರಣದಂಡನೆ ಸಂಪೂರ್ಣವಾಗಿ ರದ್ದು; ಸಾ*ವು ಗೆದ್ದ ಕೇರಳದ ನರ್ಸ್.

ನವದೆಹಲಿ : ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಯೆಮನ್ನಲ್ಲಿ ಮರಣದಂಡನೆಯನ್ನು ಎದುರಿಸುತ್ತಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಗಲ್ಲು ಶಿಕ್ಷೆಯಿಂದ ಮುಕ್ತಿಗೊಳಿಸಲಾಗಿದೆ. ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಈಗ ಶಾಶ್ವತವಾಗಿ ರದ್ದುಪಡಿಸಲಾಗಿದೆ. ಈ ಸಂಬಂಧದ ಮಾಹಿತಿಯನ್ನು ಭಾರತೀಯ ಗ್ರ್ಯಾಂಡ್ ಮುಫ್ತಿ, ಕಾಂತಪುರಂ ಎಪಿ ಅಬುಬಕ್ಕರ್ ಮುಸ್ಲೈಯರ್ ಅವರ ಕಚೇರಿ ಹಂಚಿಕೊಂಡಿದೆ. ಇದಕ್ಕೂ ಮೊದಲು, ಯೆಮನ್ನಲ್ಲಿನ ಅಧಿಕಾರಿಗಳು ರಾಜತಾಂತ್ರಿಕ ಮಧ್ಯಸ್ಥಿಕೆಗಳ ನಂತರ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಮುಂದೂಡಿದ್ದರು. ಈ ನಿಮಿಷಾ ಪ್ರಿಯಾ ಪ್ರಕರಣ ಇಡೀ ಜಗತ್ತಿನಾದ್ಯಂತ ಚರ್ಚೆಯಾಗಿತ್ತು.

ಜುಲೈ 16ರಂದು ನಿಮಿಷಾ ಪ್ರಿಯಾಳಿಗೆ ನೇಣಿಗೇರಿಸಲು ದಿನ ನಿಗದಿಯಾಗಿತ್ತು. ಆದರೆ, ಭಾರತ ಸರ್ಕಾರದ ಮನವಿ ಹಾಗೂ ಧಾರ್ಮಿಕ ಮುಖಂಡರ ಮಧ್ಯಸ್ಥಿಕೆಯ ಬಳಿಕ ಆ ಗಲ್ಲು ಶಿಕ್ಷೆ ಮುಂದೂಡಲ್ಪಟ್ಟಿತ್ತು. ಭಾರತ ಸರ್ಕಾರ ಮತ್ತು ಗ್ರ್ಯಾಂಡ್ ಮುಫ್ತಿ ಅಬು ಬಕರ್ ಅಹ್ಮದ್ ಸೇರಿದಂತೆ ಹಲವಾರು ಧಾರ್ಮಿಕ ಮುಖಂಡರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದರು. ಯೆಮನ್ನ ಹೌತಿ ಅಧಿಕಾರಿಗಳು ಈ ಹಿಂದೆ ಗಲ್ಲು ಶಿಕ್ಷೆಯನ್ನು ಅಮಾನತುಗೊಳಿಸಿದ್ದರು. ಈಗ ಅದನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಇದರಿಂದಾಗಿ ನಿಮಿಷಾ ಅವರಿಗೆ ಮರುಜೀವ ಸಿಕ್ಕಿದೆ.

“ಈ ಹಿಂದೆ ಅಮಾನತುಗೊಂಡಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ. ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಯಿತು” ಎಂದು ಗ್ರ್ಯಾಂಡ್ ಮುಫ್ತಿ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಶೇಖ್ ಅಬು ಬಕರ್ ಅಹ್ಮದ್ ಒಬ್ಬ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರಾಗಿದ್ದು, ಷರಿಯಾ ಕಾನೂನಿನ ಬಗ್ಗೆ ಅವರ ಆಳವಾದ ಜ್ಞಾನಕ್ಕಾಗಿ ವ್ಯಾಪಕವಾಗಿ ಗೌರವಿಸಲ್ಪಡುತ್ತಾರೆ. “ಗ್ರಾಂಡ್ ಮುಫ್ತಿ” ಎಂಬ ಬಿರುದು ಭಾರತದಲ್ಲಿ ಅನಧಿಕೃತವಾಗಿದ್ದರೂ, ಅವರನ್ನು ಭಾರತದ ಸುನ್ನಿ ಮುಸ್ಲಿಂ ಸಮುದಾಯದಲ್ಲಿ ಮಹತ್ವದ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಅವರನ್ನು ಭಾರತದ 10ನೇ ಗ್ರ್ಯಾಂಡ್ ಮುಫ್ತಿ ಎಂದು ಕರೆಯಲಾಗುತ್ತದೆ.

Leave a Reply

Your email address will not be published. Required fields are marked *