ಬೆಂಗಳೂರು: ಕೇಂದ್ರಸಚಿವೆನಿರ್ಮಲಾಸೀತಾರಾಮನ್ ನಾಳೆ ಕಲ್ಯಾಣಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕರ್ನಾಟಕದಲ್ಲಿ ಸ್ಥಾಪಿಸಲಾಗಿರುವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳು, ರೈತರ ತರಬೇತಿ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಗಳಿಗೆ ಭೇಟಿ ನೀಡಿ, ಘಟಕಗಳ ಉದ್ಘಾಟನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಕರ್ನಾಟಕದ ಋಣವನ್ನು ಅಂತೂ ತೀರಿಸುತ್ತಿಲ್ಲ, ಹೀಗಾದ್ರೂ ಋಣ ತೀರಿಸಲಿ ಎಂದು ಹೇಳಿದ್ದಾರೆ.
ಸಚಿವೆ ನಿರ್ಮಲಾರ ಟ್ವೀಟ್ನಲ್ಲೇನಿದೆ?
ನಾಳೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಸಕ್ಕೆ ಹೊರಡುತ್ತಿದ್ದೇನೆ ಎಂದು ಟ್ವೀಟ್ ಮಾಡಿರುವ ಅವರು, ಅಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳನ್ನು ಸ್ಥಾಪಿಸಲಾಗಿದ್ದು,ಸದರಿ ರೈತರ ತರಬೇತಿ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಗಳನ್ನು ಭೇಟಿಯಾಗಿ ಅವುಗಳ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಲಿದ್ದೇನೆ. ನನ್ನ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ (MPLADS) ಬಳಸಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ತಲಾ ಒಂದು ಘಟಕವನ್ನು ಸ್ಥಾಪಿಸಲಾಗಿದೆ.
ಈ ಪ್ರವಾಸದ ಸಮಯದಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಘಟಕಗಳ ಉದ್ಘಾಟನೆ ಮಾಡಲಾಗುತ್ತದೆ. ಈ ಕೃಷಿ ಸಂಸ್ಕರಣೆ ಕೇಂದ್ರಗಳಿಂದ ತರಬೇತಿ ಪಡೆದ ರೈತರು ಮತ್ತು ಲಾಭ ಪಡೆಯುವ ರೈತರು ಹಾಗೂ ರೈತರ ಉತ್ಪಾದಕರ ಸಂಘಗಳು ಮತ್ತು ಅವರ ಕುಟುಂಬಗಳನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಎಕ್ಸ್ ಪೋಸ್ಟ್ನಲ್ಲಿ ಸಚಿವೆ ನೀಡಿರುವ ಘಟಕಗಳ ವಿವರಗಳು ಹೀಗಿವೆ
- ವಿಜಯನಗರ: ಕಡಲೆ ಬೇಳೆ, ಹುರಿದ ಕಡಲೆ, ಕಡಲೆ ಚಿಕ್ಕಿ, ಬೀಜ ತೆಗೆಯಲ್ಪಟ್ಟ ಹುಣಸೆ ಬ್ಲಾಕ್ ಮತ್ತು ಹುಣಸೆ ಪಲ್ಪ್ (ಕಡಲೆ – 200 ಕೆ.ಜಿ/ಗಂ.; ಹುಣಸೆ – 100 ಕೆ.ಜಿ/ಗಂ.)
- ಬಳ್ಳಾರಿ: ಮೆಣಸಿನ ಪುಡಿ ಮತ್ತು ಮೆಣಸಿನ ಫ್ಲೇಕ್ಸ್ (250 ಕೆ.ಜಿ/ಗಂ.)
- ಕೊಪ್ಪಳ: ಹಣ್ಣಿನ ಪಲ್ಪ್, ಹಣ್ಣಿನ ಜ್ಯೂಸ್ ಮತ್ತು ಅಮಚೂರ್ ಪುಡಿ (500 ಕೆ.ಜಿ/ಗಂ.)
- ರಾಯಚೂರು: ಚಿಲಾ ಪ್ರೀಮಿಕ್ಸ್,ಕಡ್ಲೆ ಬೇಳೆ ಹಾಗೂ ತೊಗರಿ ದಾಲ್ ಮಿಲ್ (350 ಕೆ.ಜಿ/ಗಂ.)
- ಯಾದಗಿರಿ: ಕಡಲೆ ಬೆಣ್ಣೆ, ಹುರಿದ ಕಡಲೆ ಮತ್ತು ಕಡಲೆ ಎಣ್ಣೆ (300 ಕೆ.ಜಿ/ಗಂ.)
- ಕಲಬುರಗಿ: ಸಿರಿಧಾನ್ಯ ಫ್ಲೇಕ್ಸ್, ಪಾಪ್ಸ್, ಹಿಟ್ಟು ಮತ್ತು ಸಂಪೂರ್ಣ ಸಿರಿಧಾನ್ಯಗಳು (500 ಕೆ.ಜಿ/ಗಂ.)
- ಬೀದರ್: ಸೋಯಾಬೀನ್ ಟೋಫು ಮತ್ತು ಸೋಯಾ ಹಾಲು (300 ಕೆ.ಜಿ/ಗಂ.)
ನಿರ್ಮಲಾ ಅವರ ಕರ್ನಾಟಕ ಭೇಟಿ ಕುರಿತು ಪ್ರಿಯಾಕ್ ಖರ್ಗೆ ವ್ಯಂಗ್ಯ
ನಿರ್ಮಲಾ ಕರ್ನಾಟಕದಿಂದಲೇ ಕೇಂದ್ರಕ್ಕೆ ಹೋದರೂ ಕರ್ನಾಟಕದ ಅಭಿವೃದ್ಧಿ ಕಡೆ ತಲೆ ಹಾಕಲಿಲ್ಲ ಎಂಬ ಕಾಂಗ್ರೆಸ್ಸಿಗರ ಆರೋಪಕ್ಕೆ ಒತ್ತು ನೀಡುವಂತೆ ಈಗ ಖರ್ಗೆ ಸಹ ಸಚಿವೆಯ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸಚಿವೆ ನಿರ್ಮಲಾ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಬೆಂಗಳೂರಿನ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ‘ಅಂತೂ ನಿರ್ಮಲಾ ಬರುತ್ತಿರೋದು ಸಂತೋಷದ ವಿಚಾರ. ಮಾಧ್ಯಮದ ಮುಲಕ ನನ್ನ ಮನವಿ ಏನೆಂದರೆ, ನಾವು ಕಲ್ಯಾಣ ಕರ್ನಾಟಕ ಮಂಡಳಿಯಿಂದ 5 ಸಾವಿರ ಕೋಟಿ ನೀಡುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ನೀಡಿದಂತೆಯೇ ನಮಗೂ ಸಹ ಮ್ಯಾಚಿಂಗ್ ಗ್ರಾಂಟ್ ಕೊಡಿ. ಕರ್ನಾಟಕದ ಋಣವಂತೂ ತೀರಿಸಲಿಲ್ಲ. ಹೀಗಾದ್ರೂ ಋಣ ತೀರಿಸಿ‘ ಎಂದಿದ್ದಾರೆ.
For More Updates Join our WhatsApp Group :
