ಬೆಂಗಳೂರು: ನನಗೆ ಚುನಾವಣೋತ್ತರ ಸಮೀಕ್ಷೆ ಮೇಲೆ ವಿಶ್ವಾಸವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿ, ಎಕ್ಸಿಟ್ ಪೋಲ್ ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ಚುನಾವಣೋತ್ತರ ಸಮೀಕ್ಷೆ ನಡೆಸುವವರು ಅಲ್ಪಪ್ರಮಾಣದ ಮಾದರಿಗಳನ್ನು ಸಂಗ್ರಹಿಸಿರುತ್ತಾರೆ. ಆಳವಾದ ಸಮೀಕ್ಷೆ ನಡೆಯುವುದಿಲ್ಲ. ಹೀಗಾಗಿ ಈ ಸಮೀಕ್ಷೆಗಳಿಂದ ನಿಖರ ಮಾಹಿತಿ ಬರುವುದಿಲ್ಲ. ಈ ಎಕ್ಸಿಟ್ ಪೋಲ್ ಮೇಲೆ ನನಗೆ ವಿಶ್ವಾಸವಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ 3-4 ಸ್ಥಾನ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಮಾಹಿತಿ ತೋರಿಸುತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ. ದೇಶದ ಅಧಿಕಾರವನ್ನು ಇಂಡಿಯಾ ಮೈತ್ರಿಕೂಟ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿವಿಧ ಸಂಸ್ಥೆಗಳು ಮತ್ತು ಮಾಧ್ಯಮಗಳು ಚುನಾವಣೋತ್ತರ ಇಂದು ಸಮೀಕ್ಷೆ ನಡೆಸಿದ್ದು, ಮತದಾನೋತ್ತರ ಸಮೀಕ್ಷೆಯಲ್ಲಿ ರಾಜ್ಯವಾರು ಸಮೀಕ್ಷೆಗಳ ಪೈಕಿ ಬಿಜೆಪಿ ನೇತೃತ್ವದ ಎನ್ಡಿಎ ಹಲವು ಕಡೆ ಹೆಚ್ಚಿನ ಸೀಟುಗಳನ್ನು ಸಂಪಾದಿಸಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದ 28 ಕ್ಷೇತ್ರಗಳ ಬಗ್ಗೆಯೂ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕಳೆದ ಬಾರಿಗೆ ಹೋಲಿಸಿದರೆ, ಕಾಂಗ್ರೆಸ್ ಕನಿಷ್ಠ 5ರಿಂದ 6 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಬಿಜೆಪಿಗೆ ಇದೇ 5 ರಿಂದ 6 ಸ್ಥಾನಗಳು ನಷ್ಟವಾಗುವ ನಿರೀಕ್ಷೆ ಇದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.