ಬೆಂಗಳೂರು: ದೆಹಲಿಗೆ ಹೋಗಿ ಸಚಿವನಾಗುವುದಕ್ಕಿಂತ ರಾಜ್ಯದ ಸಮಸ್ಯೆಗೆ ಪರಿಹಾರ ದೊರಕಿಸಲು ಪ್ರಯತ್ನಿಸುವೆ. ನೀರಾವರಿ ವಿಷಯದಲ್ಲಿ ನ್ಯಾಯ ಪಡೆಯಬೇಕು. ಕೇಂದ್ರ ಸರ್ಕಾರಕ್ಕೆ ಯಾವ ಮುಜುಗರವನ್ನೂ ನಾನು ಮಾಡುವುದಿಲ್ಲ. ಮೈತ್ರಿ ಧರ್ಮ ಪಾಲನೆ ಮಾಡುತ್ತೇನೆ. ರಾಜ್ಯದ ಎಲ್ಲಾ ಸಂಸದರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಸಂಸದ ಕುಮಾರಸ್ವಾಮಿ ಹೇಳಿದ್ದಾರೆ.
ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ರಾಜ್ಯ ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ ಮೈತ್ರಿಕೂಟಕ್ಕೆ ತಮ್ಮ ಕಡೆಯಿಂದ ಯಾವುದೇ ಮುಜುಗರವಾಗುವುದಿಲ್ಲ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಟಿಕೆಟ್‌ನಲ್ಲಿ ಗೆದ್ದಿದ್ದಾರೆ.
ಕರ್ನಾಟಕ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉತ್ಸುಕನಾಗಿದ್ದೇನೆ. ಮೈತ್ರಿ ನಿಯಮಗಳನ್ನು ಪಾಲಿಸುತ್ತೇನೆ. ಕರ್ನಾಟಕದ ಸಂಸದರು ರಾಜ್ಯದ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕುರಿತು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣದ ಹಾಲಿ ಶಾಸಕ. ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿನ ಕುರಿತು ಮಾತನಾಡಿದ ಕುಮಾರಸ್ವಾಮಿ, ನಮ್ಮ ಅಭ್ಯರ್ಥಿಗಳು ಉತ್ತಮ ಅಂತರದಿಂದ ಗೆದ್ದಿದ್ದಾರೆ. ಮೈತ್ರಿ ಎಷ್ಟು ಪ್ರಬಲವಾಗಿದೆ ಎಂದು ಕಾಂಗ್ರೆಸ್‌ಗೆ ಈಗ ಅರಿವಾಗಬೇಕು, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಭ್ರಮೆಯಲ್ಲಿ ಬದುಕುತ್ತಿವೆ, ಮುಂದಿನ 10 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಎಂಎಲ್‌ಸಿ ಚುನಾವಣೆಯ ಫಲಿತಾಂಶಗಳು ತಮ್ಮ ಒಂದು ವರ್ಷದ ಆಡಳಿತದ ಬಗ್ಗೆ ಜನರು ಅತೃಪ್ತಿ ಹೊಂದಿದ್ದಾರೆಂದು ಅವರಿಗೆ ಅರಿವಾಯಗಿದೆ ಎಂದು ಅವರು ಹೇಳಿದರು.
ಎಸ್‌ಟಿ ಕಾರ್ಪೊರೇಷನ್ ವಿಚಾರವಾಗಿ ಕುಮಾರಸ್ವಾಮಿ ಅವರು, ಸಿಎಂ ಮತ್ತು ಡಿಸಿಎಂ ಅವರ ಗಮನಕ್ಕೆ ಬಂದು ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ. ಹಗರಣದ ಮೊತ್ತವನ್ನು ಒಬ್ಬ ಸಚಿವರಿಂದ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು, ಕರ್ನಾಟಕದ ಹಣವನ್ನು ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ಬಳಸಿದೆ ಎಂದು ಆರೋಪಿಸಿದರು.