ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಸೇರಿ ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿರುವ ನಟ ದರ್ಶನ್ ಮೇಲೆ ಸಾಲು ಸಾಲು ಕೇಸುಗಳು ದಾಖಲಾಗಿದ್ದರೂ ಅಭಿಮಾನಿಗಳಿಗೆ ಅವರ ಮೇಲಿ ನ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ಅದು ಇಂದು ಅವರು ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದಾಗ ಅಲ್ಲಿ ನೆರೆದಿದ್ದ ಅಭಿಮಾನಿಗಳ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.
ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ಸುದ್ದಿ ಹರಡುತ್ತಿದ್ದಂತೆ ಮಂಗಳವಾರ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಜೈಲಿನ ಬಳಿ ಜಮಾಯಿಸಿದ್ದರು. ದರ್ಶನ್ ದರ್ಶನಕ್ಕೆ ಕಾಯುತ್ತಿದ್ದರು. ಬಳ್ಳಾರಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ತಾಲೂಕುಗಳಿಂದಲೂ ಬಂದಿದ್ದ ಅಭಿಮಾನಿಗಳ ದಂಡು ನೆರೆದಿತ್ತು.
ದರ್ಶನ್ ಕೃತ್ಯದ ಬಗ್ಗೆ ಅವರ ಅಭಿಮಾನಿಗಳಿಗೆ ಅಷ್ಟೊಂದು ಆಸಕ್ತಿ ಇದ್ದಂತೆ ಕಾಣುತ್ತಿರಲಿಲ್ಲ. ಅಣ್ಣ ಅಪರಾಧ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನ್ಯಾಯಾಲಯ ನಿರ್ಧರಿಸುತ್ತದೆ. ನಮ್ಮ ಪಾಲಿಗೆ ಆತ ಹೀರೋ. ನಮ್ ಬಾಸ್ ಯಾರು, ಚಾಲೆಂಜಿಂಗ್ ಸ್ಟಾರ್, ಅವರು ಯಾವತ್ತಿದ್ದರೂ ನಮಗೆ ರಾಜನ ತರನೇ ಕಾಣ್ತಾರೆ ಎಂದು ಹೇಳುತ್ತಿದ್ದರು.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬ್ರಾಂಡೆಂಡ್ ಟೀ ಶರ್ಟ್ ಧರಿಸಿ, ನೀರಿನ ಬಾಟೆಲ್, ಸನ್ ಗ್ಲಾಸ್, ಹೊದಿಕೆ ಹಿಡಿದು ನಟ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದ ಒಳಗೆ ಪ್ರವೇಶಿಸುತ್ತಿದ್ದಂತೆ ಜೈಲಿನ ಹೊರಗೆ ಜಮಾಯಿಸಿದ್ದ ಅಭಿಮಾನಿಗಳು ನಟ ದರ್ಶನ್ ಗೆ ಜೈ ಎಂದು ಜೈಕಾರ ಹಾಕುತ್ತಿದ್ದರು. ದರ್ಶನ್ ಆಗಮನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಜೈಲಿನ ಬಳಿ ಜಮಾಯಿಸಿದ್ದು ನೂಕುನುಗ್ಗಲು ಉಂಟಾಗಿತ್ತು. ಜೈಲಿನ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಅಭಿಮಾನಿಗಳು ಡಿ ಬಾಸ್, ಡಿ ಬಾಸ್ ಎಂದು ಜೈಕಾರ ಕೂಗಿದ್ದಾರೆ. ದರ್ಶನ್ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದು, ಪೊಲೀಸರು ಲಾಠಿ ಚಾರ್ಜ್ ಮೂಲಕ ಅಭಿಮಾನಿಗಳನ್ನು ಚದುರಿಸಿದರು.