16ನೇ ಹಣಕಾಸು ಆಯೋಗ ಸಭೆ || ರಾಜ್ಯಕ್ಕೆ ಶೇ 60 ತೆರಿಗೆ ಪಾಲು ನೀಡಿ : ಸಿಎಂ

16ನೇ ಹಣಕಾಸಿನ ಆಯೋಗದವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

16ನೇ ಹಣಕಾಸಿನ ಆಯೋಗದವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: 16ನೇ ಹಣಕಾಸು ಆಯೋಗ ಅನುದಾನ ಹಂಚಿಕೆ ಸಮತೋಲಿತ ಹಾಗೂ ಪಾರದರ್ಶಕತೆಯಿಂದ ಕೂಡಲಿ ಎಂಬುದು ರಾಜ್ಯದ ನಿರೀಕ್ಷೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ 16ನೇ ಹಣಕಾಸು ಆಯೋಗದ ಜೊತೆಗಿನ ಸಭೆಯಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ಖಾಸಗಿ ಹೋಟೆಲ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಅರವಿಂದ ಪನಗಾರಿಯ ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದರು. ಸಭೆಯಲ್ಲಿ ಸಚಿವ ಸಂಪುಟದ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಸರ್ಕಾರದ ಹಿರಿಯ ಅಧಿಕಾರಿಗಳು ಇದ್ದರು.

ಈ ವೇಳೆ, ಪ್ರಸ್ತಾವಿಕ ಭಾಷಣ ಮಾಡಿದ ಸಿಎಂ, ಉತ್ತಮವಾಗಿ ಪ್ರಗತಿ ಕಾಣುತ್ತಿರುವ ರಾಜ್ಯಗಳತ್ತ ಹಣಕಾಸು ಆಯೋಗ ಹೆಚ್ಚಿನ ಸಮಾನ ಆದ್ಯತೆ ನೀಡುವ ಅಗತ್ಯ ಇದೆ. ಪ್ರಗತಿಶೀಲ ರಾಜ್ಯಗಳ ಜನತೆ ತಮ್ಮ ತೆರಿಗೆ ಹಣದಿಂದ ರಾಜ್ಯಕ್ಕೆ ಅನುಕೂಲಕರವಾಗಿರಬೇಕು ಎಂಬ ನಿರೀಕ್ಷೆ ಹೊಂದಿದ್ದಾರೆ ಎಂದು ತಿಳಿಸಿದರು.

ರಾಜ್ಯದಿಂದ ಕೇಂದ್ರಕ್ಕೆ 4 ಲಕ್ಷ ಕೋಟಿ ತೆರಿಗೆ: ಕರ್ನಾಟಕವು ದೇಶದ ಪ್ರಗತಿಯಲ್ಲಿ ಕೇಂದ್ರ ಬಿಂದುವಾಗಿದೆ. ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಸುಮಾರು ಶೇ8.4ರಷ್ಟು ಕೊಡುಗೆ ನೀಡುತ್ತಿದೆ. ರಾಜ್ಯ ಜಿಎಸ್​ಟಿ ಸಂಗ್ರಹದಲ್ಲಿ ದೇಶಕ್ಕೆ ಎರಡನೇ ಅತಿ ದೊಡ್ಡ ರಾಜ್ಯವಾಗಿದೆ. ರಾಜ್ಯದಿಂದ ವಾರ್ಷಿಕ ಸುಮಾರು 4 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ತೆರಿಗೆ ಹಣ ಕೇಂದ್ರಕ್ಕೆ ಹೋಗುತ್ತಿದೆ. ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ವಾರ್ಷಿಕ ಸುಮಾರು 45 ಸಾವಿರ ಕೋಟಿ ರೂ., 15,000 ಕೋಟಿ ರೂ. ಕೇಂದ್ರಾನುದಾನ ಬರುತ್ತಿದೆ. ಆ ಮೂಲಕ ರಾಜ್ಯ ಕೇಂದ್ರಕ್ಕೆ ನೀಡುವ ಒಂದು ರೂಪಾಯಿಗೆ ವಾಪಸು ಕೇವಲ 15 ಪೈಸೆ ಮಾತ್ರ ಪಡೆಯುತ್ತಿದೆ ಎಂದು ವಿವರಿಸಿದರು.

ಐದು ವರ್ಷದಲ್ಲಿ 68,275 ಕೋಟಿ ನಷ್ಟ: 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವ ತೆರಿಗೆ ಶೇ 4.71ರಷ್ಟು ಪಾಲು ಇತ್ತು. 15ನೇ ಹಣಕಾಸು ಆಯೋಗದ ವೇಳೆ ಅದು ಶೇ 3.64 ಕ್ಕೆ ಇಳಿಕೆಯಾಗಿದೆ. ತೆರಿಗೆ ಪಾಲಿನಲ್ಲಿ ಶೇ 25 ಕಡಿಮೆಯಾಗಿದೆ. ಇದರಿಂದ 2021-2026ವರೆಗೆ ಐದು ವರ್ಷದಲ್ಲಿ ರಾಜ್ಯಕ್ಕೆ 68,275 ಕೋಟಿ ರೂ. ನಷ್ಟವಾಗಿದೆ. ಹಣಕಾಸು ಆಯೋಗ ಇದನ್ನು ಮನಗಂಡು ರಾಜ್ಯಕ್ಕೆ 11,495 ಕೋಟಿ ವಿಶೇಷ ಅನುದಾನವನ್ನು ಶಿಫಾರಾಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಆ ಶಿಫಾರಸನ್ನು ಸ್ವೀಕಾರ ಮಾಡಿಲ್ಲ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಸುಮಾರು 79,770 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದರು.

ಕರ್ನಾಟಕ ವಿತ್ತೀಯವಾಗಿ ಉತ್ತನ ನಿರ್ವಹಣೆ ತೋರುತ್ತಿದ್ದರೂ ಕಡಿಮೆ ಅನುದಾನ ಪಡೆಯುವ ಮೂಲಕ ಶಿಕ್ಷೆಗೊಳಗಾಗಿದೆ. ಸೆಸ್ ಹಾಗೂ ಸರ್ಚಾರ್ಜ್ ರಾಜ್ಯಗಳಿಗೆ ನೀಡುವ ಕೇಂದ್ರದ ತೆರಿಗೆ ಹಂಚಿಕೆಯ ಭಾಗವಾಗಿಲ್ಲ. ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ಸೆಸ್ ಹಾಗೂ ಸರ್ಚಾರ್ಜ್​ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದ ರಾಜ್ಯಗಳಿಗೆ ದೊಡ್ಡ ಮಟ್ಟಿನ ನಷ್ಟವಾಗಿದೆ. ಇದರಿಂದ ಕರ್ನಾಟಕಕ್ಕೆ 2017-18 ರಿಂದ 2024-25ವರೆಗೆ ಸುಮಾರು 53,359 ಕೋಟಿ ರೂನ ನಷ್ಟವಾಗಿದೆ. ಕೇಂದ್ರದ ಅನುದಾದಲ್ಲಿ ದೊಡ್ಡ ಕಡಿತವಾಗಿದ್ದರೂ, ರಾಜ್ಯ ಸರ್ಕಾರ ತನ್ನ ಪಂಚ ಗ್ಯಾರಂಟಿಗಳಂಥ ಯೋಜನೆಗಳ ಜಾರಿಗೊಳಿಸಿ ತನ್ನ ಬದ್ಧತೆ ತೋರಿದೆ ಎಂದು ತಿಳಿಸಿದ್ದಾರೆ.

ಅನುದಾನ ಹಂಚಿಕೆಯಲ್ಲಿ ಕಡಿತ, ಮೂಲ ಸೌಕರ್ಯದ ಮೇಲಿನ ಹೂಡಿಕೆ ಕಡಿತ: ಕೇಂದ್ರದ ಅನುದಾನ ಹಂಚಿಕೆಯಲ್ಲಿ ಕಡಿತವಾಗಿರುವುದರಿಂದ ರಾಜ್ಯಗಳ ಭೌತಿಕ ಹಾಗೂ ಮಾನವ ಮೂಲಸೌಕರ್ಯ ಮೇಲಿನ ಹೂಡಿಕೆ ಸಾಮರ್ಥ್ಯವನ್ನು ಕಡಿಮೆ ಮಾಡಿದೆ. ಇದನ್ನು ತ್ವರಿತವಾಗಿ ಪರಿಹರಿಸಬೇಕಾಗಿದೆ‌. ಆರ್ಥಿಕವಾಗಿ ಸುಧಾರಿತ ರಾಜ್ಯಗಳು ಬಡ ರಾಜ್ಯಗಳನ್ನು ಸಹಕರಿಸಲು ಬದ್ಧವಾಗಿದೆ. ಆದರೆ, ಅದರಿಂದ ಸುಧಾರಿತ ರಾಜ್ಯಗಳಿಗೆ ಸಮಸ್ಯೆ ಆಗಬಾರದು. ರಾಜ್ಯಗಳಿಂದ ಸಂಗ್ರಹವಾಗುವ ಸಂಪನ್ಮೂಲದಲ್ಲಿ ದೊಡ್ಡ ಪಾಲನ್ನು ಆ ರಾಜ್ಯಗಳಿಗೇ ನೀಡಬೇಕು ಎಂದು ಮನವಿ ಮಾಡಿದರು.

ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರಾದೇಶಿಕ ಅಸಮತೋಲನ ಇದೆ. ರಾಜ್ಯವೂ ನಗರೀಕರಣದ ಸಮಸ್ಯೆ ಎದುರಿಸುತ್ತಿದೆ. ಇದಕ್ಕಾಗಿ ಹೆಚ್ಚಿನ ಕೇಂದ್ರದ ತೆರಿಗೆ ಪಾಲು ಬೇಕಾಗಿದೆ.‌ ಬೆಂಗಳೂರಿಗೆ ಮುಂದಿನ ಐದು ವರ್ಷ 55,586 ಕೋಟಿ ರೂ. ಹೂಡಿಕೆಯ ಅಗತ್ಯ ಇದೆ. ಈ ಪೈಕಿ 27,793 ಕೋಟಿ ರೂ. ಕೇಂದ್ರಾನುದಾನದ ಮನವಿ ಮಾಡುತ್ತೇವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಐದು ವರ್ಷಗಳಲ್ಲಿ ರಾಜ್ಯ 25,000 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ನಿಟ್ಟಿನಲ್ಲಿ 16ನೇ ಹಣಕಾಸು ಆಯೋಗ ನೆರವು ನೀಡುವಂತೆ ಕೋರುತ್ತೇನೆ. ಜೊತೆಗೆ ಅಪಾಯಕಾರಿ ಪಶ್ಚಿಮ ಘಟ್ಟ ಪ್ರದೇಶದ ಜನರ ಪುನರುಜ್ಜೀವನಕ್ಕಾಗಿ 10,000 ಕೋಟಿ ರೂ. ಬೇಕಾಗಿದೆ ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *