ನವದೆಹಲಿ: 18 ನೇ ಲೋಕಸಭೆ ಸ್ಪೀಕರ್ ಆಗಿ ಎನ್ಡಿಎ ಅಭ್ಯರ್ಥಿ ಓಂ ಬಿರ್ಲಾ ಧ್ವನಿ ಮತದ ಮೂಲಕ ಆಯ್ಕೆ ಆಗಿದ್ದಾರೆ. ಈ ಮೂಲಕ 2 ನೇ ಬಾರಿ ಲೋಕಸಭೆ ಸ್ಫೀಕರ್ ಆಗಿ ಓಂ ಬಿರ್ಲಾ ಮುಂದುವರೆಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಿರ್ಲಾ ಅವರಿಗೆ ಶುಭಾಶಯ ಕೋರಿದ್ದಾರೆ
1976ರ ಬಳಿಕ ಇದೇ ಮೊದಲ ಬಾರಿಗೆ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆದಿದೆ. ಇಂಡಿಯಾ ಒಕ್ಕೂಟದಿಂದ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಪ್ರತಿ ಸ್ಪರ್ಧಿಯಾಗಿದ್ದ ಕೆ. ಸುರೇಶ್ ವಿರುದ್ಧ ಓಂ ಬಿರ್ಲಾ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನ ನಂತರ, ನೂತನ ಸ್ಪೀಕರ್ ಓಂ ಬಿರ್ಲಾ ಅವರನ್ನು ಪಿಎಂ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದಿಸಿದರು. ಇಬ್ಬರೂ ಅವರನ್ನು ಸ್ಪೀಕರ್ ಕುರ್ಚಿಗೆ ಕರೆದೊಯ್ದರು. ಕಳೆದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಬಿರ್ಲಾ ಅವರ ಅನುಭವವು ದೇಶಕ್ಕೆ ಮತ್ತಷ್ಟು ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ನೂತನ್ ಸ್ಪೀಕರ್ ಅವರನ್ನು ಅಭಿನಂದಿಸಿದರು. ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡುವ ಮೂಲಕ, ಭಾರತದ ಜನರನ್ನು ಪ್ರತಿನಿಧಿಸಲು ಅವಕಾಶ ನೀಡುತ್ತೀರಿ. ಈ ಮೂಲಕ ನೀವು ಭಾರತದ ಸಂವಿಧಾನವನ್ನು ರಕ್ಷಿಸುವ ಕರ್ತವ್ಯವನ್ನು ಮಾಡುತ್ತೀರಿ ಎಂದು ನಮಗೆ ವಿಶ್ವಾಸವಿದೆ. ನಾನು ಮತ್ತೊಮ್ಮೆ ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ಆಡಳಿತಾರೂಢ ಎನ್ಡಿಎ ಹಾಗೂ ಪ್ರತಿಪಕ್ಷ ‘ಇಂಡಿಯಾ’ ಮೈತ್ರಿಕೂಟ ನಡುವೆ ಸ್ಪೀಕರ್ ಆಯ್ಕೆಗೆ ಒಮ್ಮತ ಏರ್ಪಡಲು ಸಾಧ್ಯವಾಗಿರಲಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷರಿಗೆ ಫೋನ್ ಕರೆ ಮಾಡಿ ಮಾತನಾಡಿದ್ದರಾದರೂ ಸಹಮತಕ್ಕೆ ಬರುವಲ್ಲಿ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಸ್ಪೀಕರ್ ಹುದ್ದೆಗೆ ಬಿಜೆಪಿ ಸಂಸದ, ಮಾಜಿ ಸ್ಪೀಕರ್ ಓಂ ಬಿರ್ಲಾ ಹಾಗೂ ಕಾಂಗ್ರೆಸ್ ಸಂಸದ ಕೆ.ಸುರೇಶ್ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ-ತಮ್ಮ ಸಂಸದರಿಗೆ ಬುಧವಾರ ಸದನಕ್ಕೆ ಹಾಜರಾಗುವಂತೆ ಮೂರು ಸಾಲಿನ ವಿಪ್ ಜಾರಿಗೊಳಿಸಿದ್ದವು. ಇಂದು ಅಂತಿಮವಾಗಿ ಚುನಾವಣೆ ನಡೆದು ಓಂ ಬಿರ್ಲಾ ಅವರು ಧ್ವನಿಮತದ ಮೂಲಕ ಆಯ್ಕೆ ಆದರು.
ಲೋಕಸಭೆಯಲ್ಲಿ ಎನ್‌ಡಿಎಯ 293 ಸಂಸದರ ಬೆಂಬಲವನ್ನು ಹೊಂದಿದ್ದರೆ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ 233 ಸಂಸದರಿದ್ದಾರೆ