ಸೈಬರ್ ವಂಚಕರ ಜಾಲ ಭೇದಿಸಿದ ಪೊಲೀಸರು : ಕೋಟ್ಯಂತರ ರೂ. ವರ್ಗಾವಣೆ

ಹುಬ್ಬಳ್ಳಿ: ಸೈಬರ್ ವಂಚಕರ ಬಹುದೊಡ್ಡ ಜಾಲವೊಂದನ್ನು ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆ ಪೊಲೀಸರು ಭೇದಿಸಿದ್ದಾರೆ. ದೇಶಾದ್ಯಂತ ಸೈಬರ್ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಕೆಲವು ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ವಿವಿಧ ಬ್ಯಾಂಕ್‌ ಖಾತೆಗಳಿಂದ 60 ಲಕ್ಷವನ್ನು ಫ್ರೀಜ್ ಮಾಡಿದ್ದಾರೆ.

ಬಂಧಿತ ಆರೋಪಿಗಳಲ್ಲಿ ನಿಖಿಲಕುಮಾರ ರೌನಿ ಮತ್ತು ಸಚಿನ ಬೋಲಾ ದೆಹಲಿಯವರಾಗಿದ್ದು, ಮತ್ತೊಬ್ಬ ಆರೋಪಿ ನಿಗಮ್ ಮುಂಬೈ ಮೂಲದವನಾಗಿದ್ದಾನೆ. ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ತೆರಳಿದ್ದ ಸೈಬರ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ನೇತೃತ್ವದ ತಂಡ ಎರಡು ದಿನಗಳ ಹಿಂದೆಯೇ ಆರೋಪಿಗಳನ್ನು ಬಂಧಿಸಿ, ಹುಬ್ಬಳ್ಳಿಗೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಿದೆ.

ಬಂಧಿತರಲ್ಲಿ ಇಬ್ಬರು ಆರೋಪಿಗಳು ಸಾಫ್ಟ್‌ವೇರ್ ಪರಿಣತರಾಗಿದ್ದು, ಡಾರ್ಕ್‌ನೆಟ್‌ಲ್ಲಿ ಸಕ್ರಿಯರಾಗಿ ಕೋಡಿಂಗ್ ಮತ್ತು ಡಿ-ಕೋಡಿಂಗ್ ಮಾಡುವಲ್ಲಿ ಪರಿಣತರು. ಈ ಹಿಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡಿ, ಹೊರಬಂದವರಾಗಿದ್ದಾರೆ. ಮತ್ತೊಬ್ಬ ಆರೋಪಿ ಬಟ್ಟೆ ವ್ಯಾಪಾರಿ. ಈ ಮೂವರು ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಆಸ್ಸೋಂ, ಮಧ್ಯಪ್ರದೇಶ, ತಮಿಳುನಾಡು, ದೆಹಲಿ ಹಾಗೂ ಇತರ ರಾಜ್ಯಗಳಲ್ಲಿ ಸಂಪರ್ಕ ಜಾಲ ವಿಸ್ತರಿಸಿಕೊಂಡು, ಆನ್‌ಲೈನ್ ಮೂಲಕ ವಂಚನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಗಳು ಸರ್ಕಾರಿ ಹಾಗೂ ಖಾಸಗಿಯ ವಿವಿಧ ಬ್ಯಾಂಕ್‌ಗಳ 37 ಖಾತೆಗಳಿಗೆ ಸಾರ್ವಜನಿಕರನ್ನು ವಂಚಿಸಿ ಹಣ ವರ್ಗಾಯಿಸಿಕೊಳ್ಳುತ್ತಿದ್ದರು. ಆ ಹಣವನ್ನು ದೇಶದ ವಿವಿಧೆಡೆ ಇರುವ ಬರೋಬ್ಬರಿ 270ಕ್ಕೂ ಹೆಚ್ಚು ಬ್ಯಾಂಕ್‌ನ ನಕಲಿ ಖಾತೆಗೆ ವರ್ಗಾಯಿಸಿಕೊಂಡು, ಡ್ರಾ ಮಾಡಿಕೊಳ್ಳುತ್ತಿದ್ದರು. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಅಂದಾಜು 90 ಕೋಟಿಗೂ ಅಧಿಕ ಹಣ ವರ್ಗಾವಣೆಯಾಗಿರುವ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *