ನ್ಯಾಯಮೂರ್ತಿ ವಿರುದ್ಧ ಮಹಾಭಿಯೋಗಕ್ಕೆ ಸಹಿ; ಕಾಂಗ್ರೆಸ್ ಮೇಲೆ ಜೋಶಿ ಆಕ್ರೋಶ.
ಹುಬ್ಬಳ್ಳಿ : ತಮಿಳುನಾಡಿನಲ್ಲಿ ದರ್ಗಾ ಸಮೀಪದ ದೇಗುಲದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಅನುಮತಿ ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ತಮ್ಮ ಪರವಾಗಿ ತೀರ್ಪು ಬರದಿದ್ದಾಗ ನ್ಯಾಯಾಂಗವನ್ನು ಟೀಕಿಸುವ ಮತ್ತು ನ್ಯಾಯಮೂರ್ತಿಗಳ ವಾಗ್ದಂಡನೆಗೆ ಪ್ರಯತ್ನಿಸುವ ಕಾಂಗ್ರೆಸ್ನ ವರ್ತನೆಯನ್ನು ಅವರು ಖಂಡಿಸಿದ್ದಾರೆ.
ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲಿನ ದರ್ಗಾದ ಸಮೀಪದಲ್ಲಿರುವ ಸ್ಥಳದಲ್ಲಿ ಕಾರ್ತಿಕ ದೀಪ ಹಚ್ಚಲು ಅನುಮತಿ ಕೊಟ್ಟು ತೀರ್ಪು ಪ್ರಕಟಿಸಿದ್ದಕ್ಕೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ 103 ಸಂಸದರು ವಾಗ್ದಂಡನೆಗೆ ಸಹಿ ಸಂಗ್ರಹಿಸಿದ್ದಾರೆ. ಇದರಲ್ಲಿ ಕರ್ನಾಟಕದ ಮೂವರು (ಶ್ರೇಯಸ್ ಪಟೇಲ್, ಕುಮಾರ್ ನಾಯಕ್ ಮತ್ತು ಡಾ. ಪ್ರಭಾ ಮಲ್ಲಿಕಾರ್ಜುನ್) ಸಹ ಸೇರಿದ್ದಾರೆ. ಇದು ನ್ಯಾಯಮೂರ್ತಿಗಳು ತಮಗೆ ಬೇಕಾದಂತೆ ತೀರ್ಪು ನೀಡಬೇಕು ಎಂಬ ಒತ್ತಡದ ತಂತ್ರವಾಗಿದೆ ಎಂದು ಜೋಶಿ ಉಲ್ಲೇಖಿಸಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ವಿರೋಧ ಪಕ್ಷಗಳ ಈ ‘ಹಿಂದೂ ವಿರೋಧಿ’ ಮತ್ತು ‘ಸಂವಿಧಾನ ವಿರೋಧಿ’ ಮಾನಸಿಕತೆಯನ್ನು ಜನ ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವ ಜೋಶಿ ಕರೆ ನೀಡಿದ್ದಾರೆ.
For More Updates Join our WhatsApp Group :




