ಬೆಂಗಳೂರು: ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಕುರಿತ ವಿಡಿಯೋಗಳು ಅಸಲಿ ಎಂದು ಎಫ್‌ಎಸ್‌ಎಲ್ ವರದಿಯಿಂದ ಸಾಬೀತಾಗಿದೆ ಎಂದು ತಿಳಿದುಬಂದಿದೆ.
ಹೌದು.. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೊಗಳು ಅಸಲಿ ಎಂಬುದು ಎಫ್‌ಎಸ್‌ಎಲ್ ವರದಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದ ವಿಡಿಯೊಗಳನ್ನು ಎಡಿಟ್ ಅಥವಾ ಮಾರ್ಫ್ ಮಾಡಿಲ್ಲ. ಯಾವುದೇ ರೀತಿಯಲ್ಲಿ ಎನಿಮೇಷನ್, ಗ್ರಾಫಿಕ್ಸ್‌ಗಳನ್ನು ಬಳಸಿಲ್ಲ ಎಂಬುದಾಗಿ ಎಫ್‌ಎಸ್‌ಎಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಎಸ್‌ಐಟಿ ತನಿಖೆಗೆ ಬಲ ಬಂದಂತಾಗಿದೆ.
ವಿಡಿಯೊಗಳನ್ನು ತಿರುಚಿಲ್ಲ ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು (FSL Report) ತಿಳಿಸಿದ್ದು, ಇದರಿಂದಾಗಿ ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲು ಎಸ್‌ಐಟಿಗೆ ಆನೆ ಬಲ ಬಂದಂತಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊಗಳಲ್ಲಿ ಪುರುಷನ ಮುಖವನ್ನು ತೋರಿಸಿಲ್ಲ. ಹಾಗಾಗಿ, ಅಶ್ಲೀಲ ವಿಡಿಯೊದಲ್ಲಿರುವುದು ಪ್ರಜ್ವಲ್ ರೇವಣ್ಣ ಹೌದೋ, ಅಲ್ಲವೋ ಎಂಬುದು ಇದುವರೆಗೆ ದೃಢವಾಗಿಲ್ಲ. ಈಗ ವಿಡಿಯೊಗಳು ಅಸಲಿಯಾಗಿವೆ ಎಂಬುದು ಮಾತ್ರ ವರದಿಯಿಂದ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಹೌದೋ, ಅಲ್ಲವೋ ಎಂಬುದು ಕೂಡ ಬಯಲಾಗಲಿದೆ.
ಎಫ್‌ಎಸ್‌ಎಲ್ ವರದಿ ಬಳಿಕ ಎಸ್‌ಐಟಿ ಅಧಿಕಾರಿಗಳ ತನಿಖೆಯು ಚುರುಕುಗೊಂಡಿದ್ದು, ಶೀಘ್ರದಲ್ಲೇ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸುತ್ತಾರೆ. ಅದರಲ್ಲಿ, ಎಫ್‌ಎಸ್‌ಎಲ್ ವರದಿಯ ಕುರಿತು ಕೂಡ ಉಲ್ಲೇಖಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.